ಛಪ್ರಾ: ಬಿಹಾರದ ಸರನ್ ಜಿಲ್ಲೆಯಲ್ಲಿ ವಿಷಕಾರಿ ಮದ್ಯ ಸೇವಿಸಿ 11 ಜನರು ಸಾವಿಗೀಡಾಗಿದ್ದು, 12 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಹಲವರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ರಾಜೇಶ್ ಮೀನಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಅವರು, ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮತ್ತು ಸ್ಥಳೀಯ ಕಾವಲುದಾರರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಮದ್ಯ ಸೇವಿಸಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಅಸ್ವಸ್ಥಗೊಂಡಿರುವ ಬಗ್ಗೆ ಗುರುವಾರ ಮಾಹಿತಿ ಲಭಿಸಿತ್ತು. ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಫುಲ್ವಾರಿಯಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಂದ ಈ ಘಟನೆ ವರದಿಯಾಗಿದೆ ಎಂದಿದ್ದಾರೆ.
'ಪೊಲೀಸ್, ಅಬಕಾರಿ ಮತ್ತು ವೈದ್ಯಕೀಯ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಸ್ವಸ್ಥರಾದವರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿದ್ದವರನ್ನು ಪಾಟ್ನಾದ ಪಿಎಂಸಿಹೆಚ್ ಆಸ್ಪತ್ರೆಗೆ ರವಾನಿಸಲಾಗಿದೆ' ಎಂದು ಅವರು ಛಪ್ರಾ ಪಟ್ಟಣದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂಬತ್ತು ಮಂದಿ ಬಳಿಕ ಮೃತಪಟ್ಟಿದ್ದಾರೆ. ಇನ್ನೂ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೂ ಪಂಚಾಂಗದ ಶ್ರಾವಣ ಮಾಸದ ಹಬ್ಬದಂದು ಹಳ್ಳಿಗಳಲ್ಲಿ ಮದ್ಯ ಸೇವಿಸುವ ಸಂಪ್ರದಾಯವಿದೆ ಎಂಬುದು ಬೆಳಕಿಗೆ ಬಂದಿದೆ. ಸ್ಥಳೀಯರು ವಿಷಕಾರಿ ಮದ್ಯವನ್ನು ಸೇವಿಸಿದ ವೇಳೆ ಅಂದರೆ, ಆಗಸ್ಟ್ 3 ರಂದು ಉತ್ಸವವನ್ನು ನಡೆಸಲಾಗಿತ್ತು. ಹೀಗಾಗಿ ಮದ್ಯ ಸೇವಿಸಿದ್ದರು ಎನ್ನಲಾಗಿದೆ.
ಸ್ಥಳೀಯ ಸಂಪ್ರದಾಯವನ್ನು ಗಮನಿಸಿ, ಮದ್ಯ ಸೇವನೆಯನ್ನು ತಡೆಗಟ್ಟುವಲ್ಲಿ ವಿಫಲರಾದ ಕಾರಣ ಎಸ್‌ಎಚ್‌ಒ ಮತ್ತು ಕಾವಲುಗಾರನನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಏಪ್ರಿಲ್ 2016 ರಲ್ಲಿ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು.
ಅದೇನೇ ಇದ್ದರೂ, ಕಳೆದ ವರ್ಷ ನವೆಂಬರ್‌ನಿಂದ, ರಾಜ್ಯದಲ್ಲಿ ಇಂತಹ ಹಲವಾರು ದುರಂತಗಳು ವರದಿಯಾಗಿವೆ. ಇದರಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
Advertisement