

ಮುಂಬೈ: ವಾಣಿಜ್ಯ ನಗರಿ ಮುಂಬೈಯ ಫೈವ್ ಸ್ಟಾರ್ ಹೋಟೆಲ್ ವೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿರುವುದಾಗಿ ವರದಿಯಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಹೋಟೆಲ್ ನ ನಾಲ್ಕು ಕಡೆಗಳಲ್ಲಿ ಬಾಂಬ್ ಇಡಲಾಗಿದೆ. ಬಾಂಬ್ ಗಳನ್ನು ನಿಷ್ಕ್ರೀಯಗೊಳಿಸಬೇಕಾದರೆ 5 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಂತರ ಅಂಧೇರಿಯಲ್ಲಿರುವ ಹೋಟೆಲ್ ನಲ್ಲಿ ತಪಾಸಣೆ ನಡೆಸಿದಾಗ, ಪ್ರಾಥಮಿಕ ತನಿಖೆ ವೇಳೆ ಇದೊಂದು ಹುಸಿ ಕರೆಯಾಗಿತ್ತು ಎಂದು ಸಹರ್ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ನಂತರ ಹೋಟೆಲ್ ಸಿಬ್ಬಂದಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ ನಂತರ ಐಪಿಸಿ ಸೆಕ್ಷನ್ 385 ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಸಹರ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾಗಿ ಅವರು ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಬಂಧಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.