ಭಾರತದ ಸೂಪರ್ ಪವರ್ ಜಾಗತಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಭಾರತಕ್ಕೆ ಇತರ ದೇಶಗಳ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ಇಚ್ಛೆಯಿಲ್ಲ ಅಥವಾ ಇತರ ದೇಶಗಳ ಭೂಮಿಯನ್ನೂ ಅದು ವಶಪಡಿಸಿಕೊಳ್ಳಲು ಬಯಸುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಶನಿವಾರ ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್
Updated on

ನವದೆಹಲಿ: ಭಾರತಕ್ಕೆ ಇತರ ದೇಶಗಳ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ಇಚ್ಛೆಯಿಲ್ಲ ಅಥವಾ ಇತರ ದೇಶಗಳ ಭೂಮಿಯನ್ನೂ ಅದು ವಶಪಡಿಸಿಕೊಳ್ಳಲು ಬಯಸುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಶನಿವಾರ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ 95ನೇ ಎಫ್‌ಐಸಿಸಿಐ ವಾರ್ಷಿಕ ಸಮಾವೇಶ ಮತ್ತು ಎಜಿಎಂನಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಭಾರತವು ಸೂಪರ್ ಪವರ್ ಆಗುವ ಪ್ರಯಾಣದಲ್ಲಿದೆ. ಆದರೆ ಅದು ಇತರ ದೇಶಗಳ ಮೇಲೆ ಪ್ರಾಬಲ್ಯ ಸಾಧಿಸುವ ಅನ್ವೇಷಣೆಯಲ್ಲ.  ಲೋಕಕಲ್ಯಾಣಕ್ಕಾಗಿ ದುಡಿಯುವ ಮಹಾಶಕ್ತಿಯಾಗುವುದು ಭಾರತ ಬಯಕೆ ಎಂದು ಹೇಳಿದ್ದಾರೆ.

“ಪ್ರಧಾನಿ ಅವರು ಕೆಂಪು ಕೋಟೆಯಲ್ಲಿ ತಮ್ಮ ಭಾಷಣದಲ್ಲಿ ದೇಶಕ್ಕೆ ಐದು ಪ್ರತಿಜ್ಞೆಗಳ ಬಗ್ಗೆ ಮಾತನಾಡಿದರು, ಇದು ಭಾರತವನ್ನು ಸೂಪರ್ ಪವರ್ ಮಾಡಲು ಅವಶ್ಯಕವಾಗಿದೆ” ಎಂದು ತಿಳಿಸಿದರು.

ಚೀನಾ ಮತ್ತು ಭಾರತದ ಬೆಳೆಯುತ್ತಿರುವ ಆರ್ಥಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು, “1949ರಲ್ಲಿ ಚೀನಾದ ಜಿಡಿಪಿ ಭಾರತಕ್ಕಿಂತ ಕಡಿಮೆ ಇತ್ತು, 1980ರವರೆಗೂ ಭಾರತ ಟಾಪ್ 10 ಆರ್ಥಿಕತೆಗಳ ಪಟ್ಟಿಯಲ್ಲಿ ಇರಲಿಲ್ಲ. 2014ರಲ್ಲಿ ಭಾರತ ವಿಶ್ವ ಆರ್ಥಿಕತೆಯಲ್ಲಿ 9ನೇ ಸ್ಥಾನಕ್ಕೆ ಬಂದಿತು.ಇಂದು ಭಾರತ $3.5 ಟ್ರಿಲಿಯನ್ ಆರ್ಥಿಕತೆಗೆ ಹತ್ತಿರದಲ್ಲಿದೆ ಮತ್ತು ವಿಶ್ವದಲ್ಲಿ 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ” ಎಂದರು.

ತವಾಂಗ್ ಬಳಿ ಭಾರತ ಮತ್ತು ಚೀನಾದ ಪಡೆಗಳ ನಡುವಿನ ಇತ್ತೀಚಿನ ಘರ್ಷಣೆಯನ್ನು ಉಲ್ಲೇಖಿಸಿದ ಅವರು, “ಅದು ಗಾಲ್ವಾನ್ ಅಥವಾ ತವಾಂಗ್ ಆಗಿರಲಿ, ನಮ್ಮ ರಕ್ಷಣಾ ಪಡೆಗಳು ತಮ್ಮ ಶೌರ್ಯ ಮತ್ತು ವೀರತ್ವವನ್ನು ಸಾಬೀತುಪಡಿಸಿವೆ” ಎಂದು ಹೇಳಿದರು.

ಗಡಿ ಸಂಘರ್ಷದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿದ ಶೌರ್ಯ ಶ್ಲಾಘನೀಯವಾಗಿದೆ ಮತ್ತು ಅವರನ್ನು ಎಷ್ಟು ಹೊಗಳಿದರೂ ಸಾಕಾಗುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಗಡಿ ರೇಖೆ ನಿಭಾಯಿಸುತ್ತಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

"ನಾವು ವಿರೋಧ ಪಕ್ಷದಲ್ಲಿರುವ ಯಾವುದೇ ನಾಯಕನ ಉದ್ದೇಶವನ್ನು ಎಂದಿಗೂ ಪ್ರಶ್ನಿಸಿಲ್ಲ, ನಾವು ನೀತಿಗಳ ಆಧಾರದ ಮೇಲೆ ಮಾತ್ರ ಚರ್ಚೆ ನಡೆಸಿದ್ದೇವೆ. ರಾಜಕೀಯವು ಸತ್ಯದ ಆಧಾರದ ಮೇಲೆ ಇರಬೇಕು. ಸುಳ್ಳಿನ ಆಧಾರದ ಮೇಲೆ ದೀರ್ಘಕಾಲ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದರು.

"ಸಮಾಜವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ಪ್ರಕ್ರಿಯೆಯನ್ನು 'ರಾಜನೀತಿ' (ರಾಜಕೀಯ) ಎಂದು ಕರೆಯಲಾಗುತ್ತದೆ. ಒಬ್ಬರ ಉದ್ದೇಶವನ್ನು ಸದಾಕಾಲ ಅನುಮಾನಿಸುವ ಹಿಂದಿನ ಕಾರಣ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ವಿಶ್ವ ವೇದಿಕೆಯಲ್ಲಿ ಭಾರತದ ಘನತೆ ಬಹು ಎತ್ತರಕ್ಕೆ ಸಾಗಿದೆ. ಇಂದು ಭಾರತವು ವಿಶ್ವ ವೇದಿಕೆಯಲ್ಲಿ ಕಾರ್ಯಸೂಚಿಯನ್ನು ಹೊಂದಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com