ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಅರ್ಜಿ: ಜನವರಿ 2ರಂದು ಸುಪ್ರೀಂ ಕೋರ್ಟ್ ವಿಚಾರಣೆ

ಮೋಸದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯ ವಿಚಾರಣೆಯನ್ನು ಜ. 2ರಂದು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: 'ಬೆದರಿಕೆ, ಉಡುಗೊರೆಗಳು ಮತ್ತು ಆರ್ಥಿಕ ಪ್ರಯೋಜನಗಳ ಮೂಲಕ ಮಾಡುವ ಮೋಸದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯ ವಿಚಾರಣೆಯನ್ನು ಜ. 2ರಂದು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.

ಮೋಸದ, ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ವಿಶೇಷ ಕಾರ್ಯಪಡೆ ರಚಿಸುವಂತೆ ಕೋರಿ ವಕೀಲ ಅಶುತೋಷ್ ಕುಮಾರ್ ಶುಕ್ಲಾ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರ ಪೀಠ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ರಾಜ್ಯವು ಬದ್ಧವಾಗಿದೆ. ಒಬ್ಬರ ಧರ್ಮವನ್ನು ಪ್ರಚಾರ ಮಾಡುವ ಹಕ್ಕು ಯಾವುದೇ ವ್ಯಕ್ತಿಯನ್ನು ತಮ್ಮ ಧರ್ಮಕ್ಕೆ ಪರಿವರ್ತಿಸುವ ಹಕ್ಕನ್ನು ನೀಡುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

'ಬುಡಕಟ್ಟು ಪ್ರದೇಶಗಳು ಹೆಚ್ಚಾಗಿ ಅನಕ್ಷರಸ್ಥ ಪ್ರದೇಶಗಳಾಗಿವೆ. ಸಂಶೋಧನಾ ಅಂಕಿಅಂಶಗಳ ಪ್ರಕಾರ, ಈ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಲ್ಲಿ ಆರೋಗ್ಯ, ಶಿಕ್ಷಣ, ಆಹಾರ ಮತ್ತು ಕುಡಿಯುವ ನೀರಿನ ಪರಿಸ್ಥಿತಿಗಳು ಕಳಪೆಯಾಗಿವೆ. ಈ ಪ್ರದೇಶಗಳು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿವೆ. ಈ ಸಾಮಾಜಿಕ ಹಿಂದುಳಿದಿರುವಿಕೆಯು ತಮ್ಮ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಕೆಲಸ ಮಾಡಲು ಮಿಷನರಿಗಳಿಗೆ ಅವಕಾಶ ಲಭ್ಯವಾಗುತ್ತದೆ. ಇದುವೇ ಅಂತಿಮವಾಗಿ ಮತಾಂತರಕ್ಕೆ ಕಾರಣವಾಗುತ್ತದೆ' ಎಂದು ಆರೋಪಿಸಲಾಗಿದೆ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ, ವಿಶೇಷವಾಗಿ ಪರಿಶಿಷ್ಟ ಜಾತಿಗಳ ಪರಿಶಿಷ್ಟ ಪಂಗಡಗಳಿಗೆ ಸೇರಿದವರ ಧಾರ್ಮಿಕ ಮತಾಂತರವನ್ನು ತಡೆಯಲು ರಾಜ್ಯವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಿಐಎಲ್ ಪ್ರತಿಪಾದಿಸಿದೆ.

ದಾನದ ಉದ್ದೇಶವು ಮತಾಂತರವಾಗಬಾರದು ಎಂದು ಪ್ರತಿಪಾದಿಸಿದ ಸುಪ್ರೀಂ ಕೋರ್ಟ್, ಬಲವಂತದ ಧಾರ್ಮಿಕ ಮತಾಂತರವು 'ಗಂಭೀರ ವಿಷಯ' ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಈ ಹಿಂದೆ ಹೇಳಿತ್ತು.

ಬಲವಂತದ ಧಾರ್ಮಿಕ ಮತಾಂತರವು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಅಡ್ಡಿಯುಂಟುಮಾಡುತ್ತದೆ  ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿತ್ತು. ಅಲ್ಲದೆ, ಈ 'ಅತ್ಯಂತ ಗಂಭೀರ' ಸಮಸ್ಯೆಯನ್ನು ನಿಭಾಯಿಸಲು ಮಧ್ಯಸ್ಥಿಕೆ ವಹಿಸಲು ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲು ಕೇಂದ್ರ ಸರ್ಕಾರವನ್ನು ಕೇಳಿದೆ.

ವಂಚನೆ, ಆಮಿಷ ಮತ್ತು ಬೆದರಿಕೆಯ ಮೂಲಕ ನಡೆಯುವ ಮತಾಂತರವನ್ನು ನಿಲ್ಲಿಸದಿದ್ದರೆ 'ಅತ್ಯಂತ ಕಠಿಣ ಪರಿಸ್ಥಿತಿ' ಉದ್ಭವಿಸುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com