ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯರ ಸರಣಿ ಆತ್ಮಹತ್ಯೆ: ಕಳೆದ 2 ವಾರಗಳಲ್ಲಿ ನಾಲ್ವರು ಸಾವು

ಕಳೆದ ಎರಡು ವಾರಗಳಲ್ಲಿ ತಮಿಳುನಾಡಿನಲ್ಲಿ 12 ನೇ ತರಗತಿಯ ಮೂವರು ಮತ್ತು ಈಗ 11 ನೇ ತರಗತಿಯ ಬಾಲಕಿ ಸೇರಿ ಒಟ್ಟು ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಕಳೆದ ಎರಡು ವಾರಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ಶಾಲಾ ಬಾಲಕಿಯರ ಸಾವಿನ ಸರಣಿಗೆ ಇದೀಗ 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸೇರ್ಪಡೆಯಾಗಿದ್ದಾಳೆ. ಮಂಗಳವಾರ ಶಿವಕಾಶಿಯ ತನ್ನ ಮನೆಯಲ್ಲಿಯೇ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ. ಇದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ನಿನ್ನೆ ಕೂಡ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಶಿವಕಾಶಿಯಲ್ಲಿ ಈ ಘಟನೆ ನಡೆದಿರುವುದು ಪತ್ತೆಯಾಗಿದೆ.

ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ನಾವು ಏನನ್ನೂ ಹೇಳಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಬಾಲಕಿಯು ತನ್ನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಬಾಲಕಿಯು ಆಗಾಗ್ಗೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಳು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವಾರಗಳಲ್ಲಿ ತಮಿಳುನಾಡಿನಲ್ಲಿ 12 ನೇ ತರಗತಿಯ ಮೂವರು ಮತ್ತು ಈಗ 11 ನೇ ತರಗತಿಯ ಬಾಲಕಿ ಸೇರಿ ಒಟ್ಟು ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ.

ಕಡಲೂರು ಜಿಲ್ಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶಿವಕಾಶಿಯಲ್ಲಿ ಈ ಘಟನೆ ನಡೆದಿದೆ.

ಕಡಲೂರು ವಿದ್ಯಾರ್ಥಿನಿ ಮನೆಯಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ 'ತನ್ನ ಹೆತ್ತವರು ತನ್ನ ಮೇಲೆ ಇಟ್ಟಿದ್ದ ಐಎಎಸ್ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ನನ್ನನ್ನು ಅಪಾರ ಒತ್ತಡಕ್ಕೆ ಸಿಲುಕಿಸಿತ್ತು' ಎಂದು ಬಾಲಕಿ ಆರೋಪಿಸಿರುವುದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಕಾರ್ತಿಕ್ ಹೇಳಿದ್ದಾರೆ.

ಮರುಕಳಿಸುತ್ತಲೇ ಇರುವ ವಿದ್ಯಾರ್ಥಿನಿಯರ ಸಾವಿಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ವಿದ್ಯಾರ್ಥಿನಿಯರು ಆತ್ಮಹತ್ಯೆಯ ಆಲೋಚನೆಗಳಿಂದ ದೂರವಿರಬೇಕು. ಹೆಣ್ಣು ಮಕ್ಕಳನ್ನು ಎಂದಿಗೂ ಆತ್ಮಹತ್ಯಾ ಯೋಚನೆಗೆ ತಳ್ಳಬಾರದು. ವಿದ್ಯಾರ್ಥಿನಿಯರಿಗೆ ಲೈಂಗಿಕ, ಮಾನಸಿಕ, ದೈಹಿಕ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com