ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

26/11 ಮುಂಬೈ ದಾಳಿಗೆ 14 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

2008 ನವೆಂಬರ್​ 26 ಮುಂಬೈ ನಗರದಲ್ಲಿ ನಡೆಯಬಾರದ ಘೋರ ದುರಂತವೊಂದು ನಡೆದುಹೋಗಿತ್ತು. ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್‌-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ದಾಳಿ ನಡೆಸಿ ಇಂದಿಗೆ 14 ವರ್ಷಗಳು ಕಳೆದಿವೆ.
Published on

ಮುಂಬೈ: 2008 ನವೆಂಬರ್​ 26 ಮುಂಬೈ ನಗರದಲ್ಲಿ ನಡೆಯಬಾರದ ಘೋರ ದುರಂತವೊಂದು ನಡೆದುಹೋಗಿತ್ತು. ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್‌-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ದಾಳಿ ನಡೆಸಿ ಇಂದಿಗೆ 14 ವರ್ಷಗಳು ಕಳೆದಿವೆ.

ಸತತ ಮೂರು ದಿನಗಳ ಕಾಲ ದೇಶದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಲಷ್ಕರ್‌ ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಲ್ಲಿ ಜನರ ಮಾರಣಹೋಮವನ್ನೇ ನಡೆಸಿದ್ದರು. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಸಮುದ್ರ ಮಾರ್ಗದಿಂದ ಬಂದ ಈ ದುಷ್ಕರ್ಮಿಗಳು ತಾಜ್‌ ಮಹಲ್‌ ಹೊಟೇಲ್, ಒಬೇರಾಯ್‌ ಹೊಟೇಲ್‌, ಲಿಯೋಪೋಲ್ಡ್‌ ಕೆಫೆ, ನಾರಿಮನ್‌ ಹೌಸ್‌, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ ಮೊದಲಾದ ಕಡೆ ಮನಬಂದಂತೆ ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದರು. ಒಟ್ಟು ನಾಲ್ಕು ದಿನಗಳ ಕಾಲ ದಾಳಿ ನಡೆಸಿದ್ದರು.

ಈ ದುರ್ಘಟನೆಯಲ್ಲಿ ಆರು ಜನ ಅಮೆರಿಕಾದ ನಾಗರಿಕರು, ಹಲವು ವಿದೇಶೀಯರೂ ಸೇರಿದಂತೆ 166 ಜನರು ಸಾವಿಗೀಡಾಗಿದ್ದರು. 300ಕ್ಕೂ ಅಧಿಕ ಜನರು ಗಾಯಾಳುಗಳಾಗಿದ್ದರು. ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ ಆಗಿತ್ತು. ಇಂದಿಗೆ ಆ ಘಟನೆ ನಡೆದು 14 ವರ್ಷಗಳು ಕಳೆದಿವೆ. ಗಾಯ ಮಾಸಿದರೂ, ಗಾಯದ ಗುರುತುಗಳು ಹಾಗೇ ಇವೆ. ಇಂದಿಗೂ ಉಗ್ರರು ತಮ್ಮ ಕ್ರೌರ್ಯ ಮೆರೆಯುತ್ತಿದ್ದಾರೆ.

2008 ನ.21ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್‌ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್‌, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಬಾಂಬ್​ ಮತ್ತು ಗುಂಡಿನ ದಾಳಿ ನಡೆಸಿದರು. ಒಟ್ಟು 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು.

ತಾಜ್‌, ಒಬೇರಾಯ್‌ ನಂತಹ ಹೋಟೆಲ್‌ಗಳು ಉಗ್ರರ ಗುಂಡಿನ ದಾಳಿ ಮತ್ತು ಬಾಂಬ್‌ ಬ್ಲಾಸ್ಟ್‌ಗೆ ಹೊತ್ತಿ ಉರಿದವು. ಜನರು ಉಗ್ರರ ಕಪಿಮುಷ್ಠಿಯಲ್ಲಿ ನರಳಿ ಅಕ್ಷರಶಃ ನರಕ ದರ್ಶನ ಕಂಡರು.ರಕ್ಷಣೆಗೆ ಹೋದ ನಮ್ಮ ಸೈನಿಕರು ಕೂಡ ಹುತಾತ್ಮರಾದರು.

ದಾಳಿ ವಿಚಾರ ತಿಳಿಯುತ್ತಲೇ ಜನರ ರಕ್ಷಣೆಗೆ ಆಗಮಿಸಿದ ಪೋಲಿಸ್‌ ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆಮತ್ತು ತುಕಾರಾಮ್‌ ಓಂಬ್ಳೆ ಮತ್ತು ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಉಗ್ರರಿಂದ ಹತರಾದರು. ಈ ಉಗ್ರಗಾಮಿ ಕೃತ್ಯವನ್ನು ಇಡೀ ವಿಶ್ವವೇ ಖಂಡಿಸಿತ್ತು.

ಉಗ್ರ ಹಾರಿಸಿದ ಗುಂಡುಗಳು ಎದೆಯನ್ನು ಸೀಳಿದರೂ ಅಪ್ರತಿಮ ಶೌರ್ಯತೋರಿದ ತುಕಾರಾಮ್‌ ಕೊನೆಯುಸಿರೆಳೆಯುವ ಹಂತದಲ್ಲಿದ್ದರೂ ಕಸಬ್‌ನ ಮೇಲೆ ಗುಂಡು ಹಾರಿಸಿ, ಆತನನ್ನು ಸೆರೆಹಿಡಿಯುವಂತೆ ಮಾಡಿದರು.

ಈ ಕಾರಣಕ್ಕಾಗಿ ಭಾರತ ಸರ್ಕಾರವು 2009ರಲ್ಲಿ ಓಂಬ್ಳೆಗೆ ಅಶೋಕ ಚಕ್ರ ಗೌರವ ನೀಡಿದೆ. ತಾಜ್‌ ಹೋಟೆಲ್‌, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ 58 ಜನರನ್ನು ಬಲಿ ಪಡೆದಿದ್ದ ಅಜ್ಮಲ್‌ ಕಸಬ್‌ನನ್ನು 2012 ನವೆಂಬರ್‌ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಹುತಾತ್ಮರಿಗೆ ಗೌರವ ಸಲ್ಲಿಸಿದ ಜನತೆ

ಈ ನಡುವೆ ಮುಂಬೈ ಉಗ್ರ ದಾಳಿ ಘಟನೆಯಲ್ಲಿ ಮಡಿದವರನ್ನು ದೇಶದ ಜನತೆ ಸ್ಮರಿಸಿದ್ದು, ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದೆ.

ಮುಂಬೈ ಉಗ್ರರ ದಾಳಿಗೆ 14 ನೇ ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಗೇಟ್‌ವೇ ಆಫ್ ಇಂಡಿಯಾ ಮತ್ತು ತಾಜ್ ಹೋಟೆಲ್ ಹೊರಗೆ ಜನರು ಗೌರವ ಸಲ್ಲಿಸಿದರು. ಈ ವೇಳೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಜನರೊಟ್ಟಿಗೆ ಗೌರವ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com