'ಗುಪ್ತಾಂಗ ಕತ್ತರಿಸಿ ರಕ್ತ ಸಿಂಪಡಣೆ, ಮಾಂಸ ಬೇಯಿಸಿ ತಿಂದ ಆರೋಪಿಗಳು'; ಆರ್ಥಿಕ ಏಳಿಗೆಗೆ ಕೇರಳದಲ್ಲಿ ನರಬಲಿ, ಬಂಧಿತರಿಗೆ ನ್ಯಾಯಾಂಗ ಬಂಧನ!

ಆರ್ಥಿಕ ಏಳಿಗೆಗೆ ನರಬಲಿ ಕೊಟ್ಟಿದ್ದ ಕೇರಳದ ದಂಪತಿ ಮತ್ತು ಮಂತ್ರವಾದಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನರಬಲಿ ಪ್ರಕರಣದ ಆರೋಪಿಗಳು
ನರಬಲಿ ಪ್ರಕರಣದ ಆರೋಪಿಗಳು

ಪತ್ತನಂತಿಟ್ಟ: ಆರ್ಥಿಕ ಏಳಿಗೆಗೆ ನರಬಲಿ ಕೊಟ್ಟಿದ್ದ ಕೇರಳದ ದಂಪತಿ ಮತ್ತು ಮಂತ್ರವಾದಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿರುವ ಕೇರಳ ನರಬಲಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹಣದ ಆಸೆಗಾಗಿ ಇಬ್ಬರು ಮಹಿಳೆಯರನ್ನು ಕತ್ತು ಸೀಳಿ ಕೊಂದಿದ್ದಲ್ಲದೇ, ಆರೋಪಿಗಳು ಅವರ ದೇಹವನ್ನು ಬೇಯಿಸಿ ತಿಂದ ಅಸಹ್ಯಕರ ಮಾಹಿತಿ ಹೊರಬಿದ್ದಿದೆ.

ರಸ್ತೆಗಳಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ದಿನನಿತ್ಯದ ಜೀವನ ನಡೆಸುತ್ತಿದ್ದ ಮಹಿಳೆ ಕೆಲ ದಿನಗಳಿಂದ ನಾಪತ್ತೆಯಾಗಿದ್ದಳು. ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು ತರಲು ಮಾಟಮಂತ್ರದ ನೆಪದಲ್ಲಿ ದಂಪತಿ ಮಹಿಳೆಯರಿಬ್ಬರ ಜೀವವನ್ನೆ ಬಲಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಹೂಳುವ ಮೊದಲು ಇಬ್ಬರು ಮಹಿಳೆಯರ ಕತ್ತು ಸೀಳಿ ಅವರ ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಆರೋಪಿಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಲಾದಲ್ಲಿ ದೇಹದ ಭಾಗಗಳನ್ನು ಹೊರತೆಗೆಯಲಾಗುತ್ತಿದೆ. ಮಹಿಳೆಯರ ಅಪಹರಣಕ್ಕೆ ವ್ಯವಸ್ಥೆ ಮಾಡಿದ ಶಂಕಿತ ಏಜೆಂಟ್ ಮತ್ತು ತಿರುವಲ್ಲಾ ಮೂಲದ ದಂಪತಿಗಳು ಸೇರಿದಂತೆ ಮೂವರು ಪೊಲೀಸ್ ವಶದಲ್ಲಿದ್ದಾರೆ ಎಂದು ವರದಿಯಾಗಿದೆ. 

ಗುಪ್ತಾಂಗ​ ಕತ್ತರಿಸಿ ಮನೆಗೆ ರಕ್ತ ಸಿಂಪಡಣೆ
ಇನ್ನು ಮಹಿಳೆಯರನ್ನು ಕೊಂದ ಆರೋಪಿಗಳು ಬಳಿಕ ಆವರ ಗುಪ್ತಾಂಗ​ ಕತ್ತರಿಸಿ ರಕ್ತವನ್ನು ತಮ್ಮ ಮನೆಗೆ ಸಿಂಪಡಿಸಿದ್ದರು. ಈ ಬಗ್ಗೆ ಪೊಲೀಸರ ಬಳಿ ಸ್ವತಃ ಆರೋಪಿಗಳು ಬಾಯಿ ಬಿಟ್ಟಿದ್ದು, ಮಹಿಳೆಯನ್ನು ಕೊಂದು ಆಕೆಯ ರಕ್ತವನ್ನು ಮನೆಗೆ ಸಿಂಪಡಿಸಿದ್ದಾಗಿ ಆರೋಪಿಗಳು ಹೇಳಿದ್ದು, ಬಳಿಕ ಆಕೆಯ ಕತ್ತು ಸೀಳಿ ಕೊಲ್ಲಲಾಗಿತ್ತು ಎಂದಿದ್ದಾರೆ. ಆದಾಗ್ಯೂ ಆರ್ಥಿಕ ಏಳಿಗೆಯಾಗಲಿಲ್ಲ ಎಂದು ಮಂತ್ರವಾದಿ ಮಾತು ಕೇಳಿ ಮತ್ತೋರ್ವ ಮಹಿಳೆಯನ್ನೂ ಇದೇ ರೀತಿ ನರಬಲಿ ನೀಡಲಾಗಿದೆ ಎನ್ನಲಾಗಿದೆ.

ನರಬಲಿ ನೀಡಿ ಮಾಂಸ ಬೇಯಿಸಿ ತಿಂದ ಆರೋಪಿಗಳು
ಕೇರಳದ ಪತ್ತನಂತಿಟ್ಟದ ಇಳಂತೂರಿನಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ರೋಸ್ಲಿಲ್ ಮತ್ತು ಪದ್ಮಾ ಎಂಬ ಮಹಿಳೆಯರು ನರಬಲಿ ಬಲಿಗೆ ಹತರಾದ ದುರ್ದೈವಿಗಳಾಗಿದ್ದಾರೆ. ಆರೋಪಿಗಳಾದ ಭಗವಲ್‌ ಸಿಂಗ್, ಆತನ ಪತ್ನಿ ಲೈಲಾ ಮತ್ತು ಇಳಂತೂರಿನಲ್ಲಿ ವಾಸವಾಗಿದ್ದ ಮಾಂತ್ರಿಕ ಶಫಿ ಸೇರಿ ಇಬ್ಬರನ್ನೂ ಕತ್ತು ಸೀಳಿ ಕೊಂದಿದ್ದಾರೆ. ಆರೋಪಿ ಲೈಲಾ ವಿಚಾರಣೆಯ ವೇಳ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದು, ಶ್ರೀಮಂತಿಕೆ, ಅಭಿವೃದ್ಧಿಗಾಗಿ ರೋಸ್‍ಲಿನ್‍ರ ದೇಹದ ಮಾಂಸವನ್ನು ಅಡುಗೆ ಮಾಡಿ ಮೂವರು ಸೇರಿ ಅದನ್ನು ಸೇವಿಸಿದ್ದಾಗಿ ಸ್ವತಃ ಆರೋಪಿ ಲೈಲಾ ಪೊಲೀಸರಿಗೆ ತಿಳಿಸಿದ್ದಾರೆ. ಅಂತೆಯೇ ಮತ್ತೋರ್ವ ಸಂತ್ರಸ್ಥೆ ಪದ್ಮಾರ ಮಾಂಸವನ್ನು ಬಳಿಕ ಪದಾರ್ಥ ಮಾಡಲೆಂದು ಇವರು ಉಪ್ಪು ಬೆರೆಸಿ ತೆಗೆದಿಟ್ಟಿದ್ದಾಗಿ ಲೈಲಾ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದಂಪತಿಗಳು ವಾಸವಿದ್ದ ತಿರುವಲ್ಲಾದಲ್ಲಿರುವ ಮನೆಗೆ ಸಾಕ್ಷ್ಯ ಸಂಗ್ರಹಕ್ಕೆ ಕರೆದುಕೊಂಡು ಹೋದಾಗ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಮೊಹಮ್ಮದ್ ಶಫಿ ಎಂಬಾತ ಮಾಂತ್ರಿಕ ರಶೀದ್‌ ಎಂದು ನಂಬಿಸಿ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಬಲಿ ಪಡೆದ ಮೃತ ದೇಹದ ಭಾಗಗಳನ್ನು ಬೇಯಿಸಿ ತಿನ್ನುವಂತೆ ಹೇಳಿದ್ದ. ನಾವು ಹಾಗೆಯೇ ಮಾಡಿದ್ದೇವೆ ಎಂದು ಆರೋಪಿ ದಂಪತಿಗಳು ಪೊಲೀಸರ ಬಳಿ ತಿಳಿಸಿದ್ದಾರೆ ಎನ್ನಲಾಗಿದೆ.

ಆರ್ಥಿಕ ಏಳಿಗೆಗಾಗಿ ನರಬಲಿ
ಆರೋಪಿ ದಂಪತಿಗಳು ತಮ್ಮ ಆರ್ಥಿಕ ಏಳಿಗೆಗಾಗಿ ನರಬಲಿ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಮುಖ್ಯಸ್ಥ (ಕೊಚ್ಚಿ ನಗರ) ಸಿ.ಎಚ್. ನಾಗರಾಜು ಅವರು, 'ನಮ್ಮ ತಂಡ ತಿರುವಲ್ಲಾಗೆ ಹೋಗಿದೆ. ಇಂತಹ ಪ್ರಕರಣಗಳು ಹೆಚ್ಚು ಇವೆಯೇ ಎಂಬುದನ್ನು ಪರಿಶೀಲಿಸಲು ನಾವು ಶಂಕಿತರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಸಂಜೆಯ ವೇಳೆಗೆ ನಾವು ಹೆಚ್ಚಿನ ವಿವರಗಳನ್ನು ಪಡೆಯುತ್ತೇವೆ. ನಾವು ಆರಂಭದಲ್ಲಿ ಅಂದಾಜಿಸಿದಂತೆ, ಇದು ಸಾಮಾನ್ಯ ಪ್ರಕರಣವಲ್ಲ ಮತ್ತು ಇದು ಅತ್ಯಂತ ಸಂವೇದನಾಶೀಲ ಮತ್ತು ಆಘಾತಕಾರಿ ಪ್ರಕರಣ ಎಂದು ಸಾಬೀತುಪಡಿಸುವ ಸಾಧ್ಯತೆಯಿದೆ' ಎಂದು ಹೇಳಿದ್ದಾರೆ.

ಇನ್ನಷ್ಟು ಬಲಿಗೆ ಯತ್ನ
ನರಬಲಿ ಪ್ರಕರಣದ ತನಿಖೆಯಲ್ಲಿ ಇನ್ನಷ್ಟು ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಿವೆ. ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ್ದಲ್ಲದೇ, ಇನ್ನಷ್ಟು ಜನರ ಬಲಿಗೂ ಆರೋಪಿಗಳು ಸಂಚು ರೂಪಿಸಿದ್ದರು. ಆರೋಪಿ ದಂಪತಿ ಮತ್ತೊಬ್ಬ ಮಹಿಳೆಯನ್ನೂ ನರಬಲಿಗಾಗಿ ತಿರುವಳ್ಳಕ್ಕೆ ಕರೆತಂದಿದ್ದರು. ಆದರೆ ಮಹಿಳೆ ಮನೆಯವರಿಗೆ ತಾನಿರುವ ಸ್ಥಳದ ಬಗ್ಗೆ ತಿಳಿಸಿದ್ದರು. ಈ ವೇಳೆ ಅವರನ್ನು ಬಲಿಕೊಟ್ಟರೆ ಸಿಕ್ಕಿಬೀಳುವ ಕಾರಣ ಯೋಜನೆಯನ್ನು ಕೈಬಿಟ್ಟಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಶಂಕಿತ ಮಂತ್ರವಾದಿ ರಶೀದ್​ ಕೂಡ ಇದೇ ಉದ್ದೇಶಕ್ಕಾಗಿ ಚಿಕ್ಕ ಮಗು ಸಮೇತ ಕುಟುಂಬವೊಂದನ್ನು ಅದೇ ಸ್ಥಳಕ್ಕೆ ಕರೆತಂದಿದ್ದರು. ಬಳಿಕ ಏನಾಯಿತು ಎಂಬ ಬಗ್ಗೆ ಬಹಿರಂಗವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನ
ಆರೋಪಿಗಳನ್ನು ಬುಧವಾರ ಬೆಳಗ್ಗೆ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com