ಬೆಂಗಳೂರು: ದೇಶದ ಹಲವು ಪ್ರದೇಶಗಳಲ್ಲಿ ತಲೆದೋರುವ ನೀರಿನ ಸಮಸ್ಯೆಗಳನ್ನು ತಮ್ಮ ಸಚಿವಾಲಯ ಬಗೆಹರಿಸಬಹುದು ಎಂದು ಕೇಂದ್ರ ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
"ನಿಮಗೆಲ್ಲಾ ಗೊತ್ತಿರಬೇಕು, ಕೇಂದ್ರ ಸರ್ಕಾರ ಅಮೃತ್ ಸರೋವರ್" ಯೋಜನೆಯನ್ನು ಜಾರಿಗೆ ತಂದಿದೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅದ್ಭುತವಾದ ಕೆಲಸಗಳನ್ನು ಮಾಡಬಹುದು ಎಂದು ಸಚಿವ ಗಡ್ಕರಿ ಭಾರತ್ ಮಾಲಾ ಸರಣಿಯಡಿಯಲ್ಲಿ ನಗರದಲ್ಲಿ ನಡೆದ ಮಂಥನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನ, ಏ.24, 2022 ರಂದು ಮಿಷನ್ ಅಮೃತ್ ಸರೋವರ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿತ್ತು. ಇದು ಭವಿಷ್ಯಕ್ಕೆ ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಭಿಯಾನದ ಭಾಗವಾಗಿತ್ತು.
ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಆರಂಭಗೊಂಡಿರುವ ಈ ಯೋಜನೆಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ 75 ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ.
ಇದನ್ನೂ ಓದಿ: 'ಹಾಳು ಬಾವಿಗೆ ಬೀಳುತ್ತೇನೆಯೇ ಹೊರತು ಕಾಂಗ್ರೆಸ್ ಸೇರುವುದಿಲ್ಲ': ನಿತಿನ್ ಗಡ್ಕರಿ
ಹಲವು ವರ್ಷಗಳಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ವಿದರ್ಭ ಪ್ರದೇಶದಿಂದ ತಾವು ಬಂದಿರುವುದಾಗಿ ಹೇಳಿದ್ದು, ರೈತರ ಆತ್ಮಹತ್ಯೆಗೆ ನೀರಿನ ಸಮಸ್ಯೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಹಲವು ಪ್ರದೇಶಗಳಲ್ಲಿ ನೀರಿನ ಬಿಕ್ಕಟ್ಟು ಇದೆ. ನೀರಿಗೆ ಅಭಾವವಿಲ್ಲ. ಆದರೆ ನೀರಿನ ನಿರ್ವಹಣೆ ಸಮಸ್ಯೆಯಾಗಿದೆ. ಹೆದ್ದಾರಿಗಳನ್ನು ಕೆರಗಳನ್ನು ನಿರ್ಮಿಸುವುದಕ್ಕೆ ಬಳಸಿಕೊಳ್ಳಬಹುದು. ಹೆದ್ದಾರಿಗಳ ನಿರ್ಮಾಣಕ್ಕೆ ಎಷ್ಟು ಮಣ್ಣು ಬೇಕಾಗುತ್ತದೆ ಎಂದರೆ, ಮಣ್ಣನ್ನು ಪಡೆಯುವ ರೀತಿ ಆ ಸ್ಥಳಗಳಲ್ಲಿ ಹೊಸ ಹೊಸ ಜಲಮೂಲಗಳನ್ನು ಸೃಷ್ಟಿಸಬಹುದು, ಇದರಿಂದಾಗಿ ರಸ್ತೆಗಳ ನಿರ್ಮಾಣದ ಅಗತ್ಯತೆ ಪೂರ್ಣಗೊಳ್ಳುವುದಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲಿ ಹೊಸ ಜಲಮೂಲಗಳು (ಕೆರೆ) ಗಳನ್ನೂ ಸೃಷ್ಟಿಸಿ ಕ್ರಮೇಣ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಉದಾಹರಣೆಯನ್ನೂ ಗಡ್ಕರಿ ನೀಡಿದ್ದು, ಇದೇ ಮಾದರಿಯ ಕಾರ್ಯನಿರ್ವಹಣೆಯಿಂದ ವಿವಿಯಲ್ಲಿ 36 ಕೆರೆಗಳು ಹಾಗೂ ಹತ್ತಿರದ ಗ್ರಾಮಗಳಲ್ಲಿ 22 ಬಾವಿಗಳು ಎನ್ ಹೆಚ್ಎಐ ಯೋಜನೆ ಜಾರಿಯಿಂದ ಲಭ್ಯವಾಗಿದೆ ಎಂದು ಹೇಳಿದ್ದು, ಈ ರೀತಿಯ ನವೀನ ಕ್ರಮಗಳು ಯೋಜನೆಯ ವೆಚ್ಚವನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೇ ಇತರರಿಗೂ ಸಹಾಯವಾಗಲಿದೆ ಎಂದು ಹೇಳಿದ್ದಾರೆ.
Advertisement