

ನವದೆಹಲಿ: ಪಾಟ್ನಾದಲ್ಲಿ ಶಂಕಿತ ಉಗ್ರ ಸಂಘಟನೆಗಳೊಂದಿಗೆ ಪಿಎಫ್ಐ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಗುರುವಾರ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, "ನಿಷೇಧಿತ" ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಫೆಡರಲ್ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.
ಬಿಹಾರದ ನಳಂದ, ಕತಿಹಾರ್, ಅರಾರಿಯಾ, ಮಧುಬನಿ, ಪಾಟ್ನಾ, ವೈಶಾಲಿ, ದರ್ಬಂಗಾ, ಮುಜಾಫರ್ಪುರ ಮತ್ತು ಸರನ್ ಜಿಲ್ಲೆಗಳಲ್ಲಿ ಆರೋಪಿಗಳು ಶಂಕಿತರೊಂದಿಗೆ ಸಂಬಂಧ ಹೊಂದಿರುವ 20 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) "ದೇಶ ವಿರೋಧಿ ಚಟುವಟಿಕೆಗಳಲ್ಲಿ" ತೊಡಗಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ತಮಿಳುನಾಡಿನ ಶಿವಗಂಗಾ ಜಿಲ್ಲೆ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಶೋಧ ನಡೆಸಿದೆ.
"ಆರೋಪಿಗಳು ಮತ್ತು ಶಂಕಿತರ ಆವರಣದಲ್ಲಿ ಇಂದು ನಡೆಸಿದ ಶೋಧಗಳಲ್ಲಿ, ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳು ಸೇರಿದಂತೆ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ವಕ್ತಾರರು ತಿಳಿಸಿದ್ದಾರೆ.