ರಾಷ್ಟ್ರೀಯ ಪಕ್ಷ ಘೋಷಣೆ ಮಾಡಿದ ಕೆಸಿಆರ್, ದಸರಾಗೆ 'ಭಾರತ್ ರಾಷ್ಟ್ರೀಯ ಸಮಿತಿ' (ಬಿಆರ್ ಎಸ್) ಪಕ್ಷ?

ನಿರೀಕ್ಷೆಯಂತೆಯೇ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ರಾಷ್ಟ್ರೀಯ ಪಕ್ಷ ಘೋಷಣೆ ಮಾಡಿದ್ದು, ದಸರಾ ಹಬ್ಬದ ದಿನದಂದು ತಮ್ಮ ನೂತನ ರಾಷ್ಟ್ರೀಯ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್ ಎಸ್)ಅನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

ಹೈದರಾಬಾದ್: ನಿರೀಕ್ಷೆಯಂತೆಯೇ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ರಾಷ್ಟ್ರೀಯ ಪಕ್ಷ ಘೋಷಣೆ ಮಾಡಿದ್ದು, ದಸರಾ ಹಬ್ಬದ ದಿನದಂದು ತಮ್ಮ ನೂತನ ರಾಷ್ಟ್ರೀಯ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್ ಎಸ್)ಅನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಎದುರಿಸಲು ವಿರೋಧ ಪಕ್ಷಗಳ ಒಗ್ಗಟ್ಟಿನ ಬಣದ ಮುಖ್ಯಸ್ಥರಾಗಬಹುದಾದ ನಾಯಕರ ಪಟ್ಟಿಯಲ್ಲಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ತಮ್ಮದೇ ರಾಷ್ಟ್ರೀಯ ಪಕ್ಷವನ್ನು ಘೋಷಣೆ ಮಾಡಿದ್ದು, 2024ರ ಚುನಾವಣೆಗೂ ಮುನ್ನ ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಸ್ಥಾಪನೆಗೆ ಮುಂದಾಗಿದ್ದಾರೆ. ದಸರಾ ಸಂದರ್ಭದಲ್ಲಿ ಅವರು ತಮ್ಮ ಈ ಹೊಸ ನಿರ್ಧಾರವನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.

ತೆಲಂಗಾಣ ಚಳವಳಿ ಆರಂಭಕ್ಕೂ ಮುನ್ನ ನಾವು ಮಾಡಿದಂತೆ ಬುದ್ಧಿಜೀವಿಗಳು, ಅರ್ಥಶಾಸ್ತ್ರಜ್ಞರು ಮತ್ತು ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸುದೀರ್ಘ ಚರ್ಚೆಯ ನಂತರ ಪರ್ಯಾಯ ರಾಷ್ಟ್ರೀಯ ಪಕ್ಷ ಕಾರ್ಯಸೂಚಿಯಲ್ಲಿ ಒಮ್ಮತವಿದೆ. ಅತಿ ಶೀಘ್ರದಲ್ಲಿಯೇ ರಾಷ್ಟ್ರೀಯ ಪಕ್ಷ ಸ್ಥಾಪಿಸಲಾಗುವುದು ಮತ್ತು ಅದರ ನೀತಿ ರೂಪಣೆ ಕೆಲಸ ನಡೆಯುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಈ ಕುರಿತು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್)ಮೂಲಗಳು ಮಾಹಿತಿ ನೀಡಿದ್ದು, ಚಂದ್ರಶೇಖರ್ ರಾವ್ ಅವರು, ಪ್ರತ್ಯೇಕ ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡಲಿದ್ದಾರೆಯೇ ಅಥವಾ ತೆಲಂಗಾಣ ರಾಷ್ಟ್ರ ಸಮಿತಿ ಅಥವಾ ಟಿಆರ್‌ಎಸ್ ಪಕ್ಷವನ್ನೇ ರಾಷ್ಟ್ರೀಯ ಪಕ್ಷವನ್ನಾಗಿ ಪರಿವರ್ತಿಸಿ ಅದಕ್ಕೆ ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರು ನಾಮಕರಣ ಮಾಡಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. 

ಹೊಸ ಪಕ್ಷ ಘೋಷಣೆ ಚರ್ಚೆ ಇದೇ ಮೊದಲೇನಲ್ಲ
ಕೆ ಚಂದ್ರಶೇಖರ್ ರಾವ್ ಅವರು ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎಂಬ ವದಂತಿ ಹರಡಿರುವುದು ಇದು ಮೊದಲ ಸಲವೇನಲ್ಲ. ಏಪ್ರಿಲ್ 27ರಂದು ನಡೆದ ಟಿಆರ್‌ಎಸ್ ಸಭೆಯಲ್ಲಿ ಅವರು, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಸಲುವಾಗಿ ಟಿಆರ್‌ಎಸ್ ಅನ್ನು ಬಿಆರ್‌ಎಸ್ ಆಗಿ ಪರಿವರ್ತಿಸುವ ಸುಳಿವು ನೀಡಿದ್ದರು. ಟಿಆರ್‌ಎಸ್ ಅನ್ನು ಬಿಆರ್‌ಎಸ್ ಆಗಿ ಬದಲಿಸುವ ನಿರ್ಣಯ ಅಂಗೀಕರಿಸಲು ಜೂನ್ ಮೂರನೇ ವಾರದಲ್ಲಿ ಟಿಆರ್‌ಎಸ್ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುವ ಬಗ್ಗೆ ಕೆಸಿಆರ್ ಮಾತನಾಡಿದ್ದರು. ಆದರೆ ಇದುವರೆಗೂ ಅದರಲ್ಲಿ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಬಿಆರ್‌ಎಸ್ ಪಕ್ಷದ ವಿಚಾರವನ್ನು ಅವರು ಮತ್ತೆ ಮತ್ತೆ ಮುಂದೂಡುತ್ತಲೇ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ತಿಂಗಳಿನಿಂದ ಜಿಲ್ಲೆಗಳ ಪ್ರವಾಸ ಕೈಗೊಳ್ಳುತ್ತಿರುವ ಕೆಸಿಆರ್, ಅಲ್ಲಿನ ಸಾರ್ವಜನಿಕ ಸಭೆಗಳಲ್ಲಿ ಮತ್ತು ಇತ್ತೀಚಿನ ಮುನುಗೋಡೆ ಉಪ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಲು ಆರಂಭಿಸಿದ್ದರು.

ಬಿಜೆಪಿಯೇತರ ಪಕ್ಷಗಳೊಂದಿಗೆ ಮೈತ್ರಿ
ದಸರಾದಲ್ಲಿ ರಾಷ್ಟ್ರೀಯ ಪಕ್ಷ ಸ್ಥಾಪಿಸಿದ ಬಳಿಕ ಚಂದ್ರಶೇಖರ್ ರಾವ್ ಅವರು ಪಕ್ಷದ ಸಮಿತಿಗಳನ್ನು ರಚಿಸಲು ಹಾಗೂ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಲು ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಜತೆಗೂಡಿಸಲು ಅವುಗಳ ನಾಯಕರನ್ನು ಕೂಡ ಭೇಟಿ ಮಾಡಲಿದ್ದಾರೆ. ವಿವಿಧ ರಾಜ್ಯಗಳಲ್ಲಿನ ಬಿಜೆಪಿಯೇತರ ಪಕ್ಷಗಳ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂಬರುವ ಗುಜರಾತ್, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿಯೇತರ ಪಕ್ಷಗಳ ಜತೆಗೂಡಿ ತಮ್ಮ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಅವರ ಯೋಜನೆಯಾಗಿದೆ ಎಂದು ಹೇಳಲಾಗಿದೆ.

ಈ ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ರೈತ ಸಮುದಾಯದ ಜನರು, ದಲಿತರು ಮತ್ತು ಒಬಿಸಿ ವರ್ಗಗಳ ನಾಯಕರನ್ನು ಗುರುತಿಸಲಾಗುವುದು. ಜತೆಗೆ, ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ಅವರಿಗೆ ಭಾರತದಾದ್ಯಂತ 'ತೆಲಂಗಾಣ ಮಾದರಿ' ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಭರವಸೆ ನೀಡುವುದಕ್ಕೆ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com