750 ಕೋಟಿ ರೂ. ಮೊತ್ತದ ಹಣಕಾಸು ಅವ್ಯವಹಾರ: ಗುಜರಾತ್ ಮಾಜಿ ಗೃಹ ಸಚಿವ ವಿಪುಲ್ ಚೌಧರಿ ಬಂಧನ

750 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಹಾಗೂ ಮೆಹ್ಸಾನಾ ಜಿಲ್ಲಾ ಸಹಕಾರಿ ಉತ್ಪಾದಕರ ಒಕ್ಕೂಟ ಲಿಮಿಟೆಡ್‌ನ (ದೂಧ್‌ಸಾಗರ್ ಡೈರಿ) ಮಾಜಿ ಅಧ್ಯಕ್ಷ ವಿಪುಲ್ ಚೌಧರಿ ಅವರನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: 750 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಹಾಗೂ ಮೆಹ್ಸಾನಾ ಜಿಲ್ಲಾ ಸಹಕಾರಿ ಉತ್ಪಾದಕರ ಒಕ್ಕೂಟ ಲಿಮಿಟೆಡ್‌ನ (ದೂಧ್‌ಸಾಗರ್ ಡೈರಿ) ಮಾಜಿ ಅಧ್ಯಕ್ಷ ವಿಪುಲ್ ಚೌಧರಿ ಅವರನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ. ಬುಧವಾರ ರಾತ್ರಿ ಗಾಂಧಿನಗರದ ಅವರ ನಿವಾಸದಲ್ಲಿ ಅವರನ್ನು ಬಂಧಿಸಲಾಗಿದೆ.

ವಿಪುಲ್ ಚೌಧರಿ ಅವರು ತಮ್ಮ ಬೆಂಬಲಿಗರೊಂದಿಗೆ ಮುಂಬರುವ ದೂಧ್‌ಸಾಗರ್ ಡೈರಿ ಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದರು. ಗುಜರಾತ್‌ನ ಸಹಕಾರಿ ಕ್ಷೇತ್ರದ ಪ್ರಮುಖ ನಾಯಕರಾಗಿರುವ ಚೌಧರಿ, 1996ರಲ್ಲಿ ಶಂಕರಸಿನ್ಹ ವಘೇಲಾ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ಚೌಧರಿ ಅವರು ಬಿಜೆಪಿ ನಾಯಕರೂ ಕೂಡ.

ವಿಪುಲ್ ಚೌಧರಿ ಅವರ ಅಧಿಕಾರಾವಧಿ 2005 ರಿಂದ 2016 ರವರೆಗೆ ಇತ್ತು. ಈ ಅವಧಿಯಲ್ಲಿ ಅವರು, 750 ಕೋಟಿ ರೂಪಾಯಿಗೂ ಹೆಚ್ಚು ವಿವಿಧ ಹಗರಣಗಳನ್ನು ಮಾಡಿದ್ದಾರೆ ಎಂದು ಎಸಿಬಿ ಜಂಟಿ ನಿರ್ದೇಶಕ ಮಕರಂದ್ ಚೌಹಾಣ್ ತಿಳಿಸಿದ್ದಾರೆ.

'ಸರ್ಕಾರದ ಮಾರ್ಗಸೂಚಿಗಳು ಮತ್ತು ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿ ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಹಾಲಿನ ಕೂಲರ್‌ಗಳನ್ನು ಖರೀದಿಸಿದ್ದಾರೆ ಮತ್ತು ಖರೀದಿಯಲ್ಲಿ ಅಕ್ರಮಗಳನ್ನು ಎಸಗಿದ್ದಾರೆ. ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಯನ್ನು ಉಲ್ಲಂಘಿಸಿ 485 ಕೋಟಿ ರೂಪಾಯಿ ವೆಚ್ಚದ ನಿರ್ಮಾಣ ಕಾಮಗಾರಿ ಮಾಡಿದ್ದಾರೆ. ಅವರು ಉಪ ಕಾರ್ಯದರ್ಶಿ ವಿರುದ್ಧ ಪರಿಷ್ಕರಣೆ ಅರ್ಜಿ ಸಲ್ಲಿಸಿದ್ದು, ವಕೀಲರ ವೆಚ್ಚವನ್ನು ಹಾಲು ಉತ್ಪಾದಕರ ಒಕ್ಕೂಟದಿಂದ ಎರವಲು ಪಡೆದಿದ್ದಾರೆ' ಎಂದು ಅವರು ಹೇಳಿದ್ದಾರೆ.

'ಇದಲ್ಲದೆ, ಹಗರಣಗಳಿಂದ ಸಂಗ್ರಹಿಸಿದ ಮೊತ್ತಕ್ಕೆ 31 ಕಂಪನಿಗಳನ್ನು ರಚಿಸಲಾಗಿದೆ. ಈ ಎಲ್ಲಾ ಕಂಪನಿಗಳನ್ನು ಸುಳ್ಳು ದಾಖಲೆಗಳ ಆಧಾರದ ಮೇಲೆ ನೋಂದಾಯಿಸಲಾಗಿದೆ. ಅವರ ಪತ್ನಿ ಮತ್ತು ಮಗ ಕೂಡ ಈ ಕಂಪನಿಯಲ್ಲಿ ನಿರ್ದೇಶಕರಾಗಿದ್ದರು' ಎಂದು ಎಸಿಬಿ ಹೇಳಿದೆ.

'ಈ ಪ್ರಕರಣದಲ್ಲಿ ಜಿಲ್ಲಾ ರಿಜಿಸ್ಟ್ರಾರ್ ಅವರು ಹೈಕೋರ್ಟ್‌ನ ಆದೇಶವನ್ನು ಪಡೆದಿದ್ದು, ನಂತರ ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಈ ತನಿಖೆಯಲ್ಲಿ ಎರಡೂ ತಂಡಗಳು ತಲಾ 14 ಹಗರಣಗಳನ್ನು ಪತ್ತೆಹಚ್ಚಿವೆ. ಈ 14 ಹಗರಣಗಳನ್ನು ವಿಜಿಲೆನ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ವಿಜಿಲೆನ್ಸ್ ಅಧಿಕಾರಿಗಳು ಅವ್ಯವಹಾರಗಳನ್ನು ಪತ್ತೆ ಮಾಡಿದ್ದಾರೆ' ಎಂದು ಎಸಿಬಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಮೇ ತಿಂಗಳಲ್ಲಿ, ಡೈರಿ ಮತ್ತು ಹಣವನ್ನು ಕಸಿದುಕೊಂಡಿದ್ದಕ್ಕಾಗಿ ಚೌಧರಿ ಮತ್ತು ಅವರ ಆಪ್ತ ಕಾರ್ಯದರ್ಶಿ ವಿರುದ್ಧ ಎಸಿಬಿ ಮೆಹ್ಸಾನಾ ಶಾಖೆಯಲ್ಲಿ ದೂರು ದಾಖಲಾಗಿದೆ. ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆ, ಫೋರ್ಜರಿ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com