ರಾಜಸ್ಥಾನ ಬಿಕ್ಕಟ್ಟು: ಸಿಎಂ ಸ್ಥಾನಕ್ಕೆ ಗೆಹ್ಲೋಟ್ ರಾಜಿನಾಮೆ?; ಹೈಕಮಾಂಡ್‌ ಸಂದೇಶ ರವಾನೆಗೆ ಕಮಲ್‌ನಾಥ್‌ ನೇಮಕ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೊದಲು ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಶೋಕ್ ಗೆಹ್ಲೋಟ್ ಅವರನ್ನು ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ನಿಯೋಜಿಸಲು ನಿರ್ಧರಿಸಿದ್ದಾರೆ.
ಅಶೋಕ್ ಗೆಹ್ಲೂಟ್ ಮತ್ತು ಸಚಿನ್ ಪೈಲಟ್
ಅಶೋಕ್ ಗೆಹ್ಲೂಟ್ ಮತ್ತು ಸಚಿನ್ ಪೈಲಟ್
Updated on

ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೊದಲು ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಶೋಕ್ ಗೆಹ್ಲೋಟ್ ಅವರನ್ನು ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ನಿಯೋಜಿಸಲು ನಿರ್ಧರಿಸಿದ್ದಾರೆ.

ಅಶೋಕ್ ಗೆಹ್ಲೋಟ್ ಅವರು ರಾಜೀನಾಮೆ ನೀಡದಿದ್ದರೆ, ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಗೆಹ್ಲೋಟ್ ಅವರಿಗೆ ತಿಳಿಸಲು ಕಮಲ್ ನಾಥ್ ಅವರನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಮಲ್ ನಾಥ್ ಅವರ ಸಂದೇಶಕ್ಕೆ ಗೆಹ್ಲೋಟ್ ಕಿವಿಗೊಡದಿದ್ದರೆ ಪಕ್ಷದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸದಂತೆ ಕೇಳಿಕೊಳ್ಳಬಹುದು ಎನ್ನಲಾಗಿದೆ.

ಸೋಮವಾರ ಭೋಪಾಲ್‌ನಿಂದ ದೆಹಲಿಗೆ ಬಂದ ಕಮಲ್‌ನಾಥ್ ಅವರು ಸೋನಿಯಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಹೈಕಮಾಂಡ್ ಸಂದೇಶವನ್ನು ತಿಳಿಸಲು ಅವರು ಜೈಪುರಕ್ಕೆ ಹಾರಲಿದ್ದು, ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗೆಹ್ಲೋಟ್ ಅವರ ಬಂಡಾಯವು ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವಂತೆ ಮಾಡಬಹುದು. ಆದರೆ ಅವರು ತಮ್ಮ ಮಾಜಿ ಡಿಸಿಎಂ ಸಚಿನ್ ಪೈಲಟ್ ಅವರನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸಲು ನಿರಾಕರಿಸಿದ್ದರಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲೂ ಕಾರಣವಾಗಬಹುದು ಎಂದು ಕಾಂಗ್ರೆಸ್ ಉನ್ನತ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಪೈಲಟ್ ಅಥವಾ ಅವರ ಪಾಳಯದಿಂದ ಸಿಎಂ ಆಗಿ ಯಾರನ್ನೂ ಸ್ವೀಕರಿಸುವುದಿಲ್ಲ ಎಂದು ಗೆಹ್ಲೋಟ್ ಬಣದ ನಾಯಕರು ಹೈಕಮಾಂಡ್ ಗೆ ತಿಳಿಸಿದ್ದಾರೆ. ಬಿಜೆಪಿಯ ನೆರವಿನೊಂದಿಗೆ ಸರ್ಕಾರ ರಚಿಸಲು ಪೈಲಟ್ ಬಣ ಮುಂದಾಗಿದ್ದು, ಇದು ಕಾಂಗ್ರೆಸ್ ಶಾಸಕರಿಗೆ ಸ್ವೀಕಾರಾರ್ಹವಲ್ಲ ಎಂದು ಗೆಹ್ಲೋಟ್ ಬಣ ಕಿಡಿಕಾರಿದೆ. ಗೆಹ್ಲೋಟ್ ಅವರಿಗೆ ನಿಷ್ಠರಾಗಿರುವ ಕಾಂಗ್ರೆಸ್ ಶಾಸಕರು ಪಕ್ಷದ ಕೇಂದ್ರ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಭಾನುವಾರ ನಿರಾಕರಿಸಿದ್ದರು. ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಲು ಶಾಸಕರನ್ನು ಪಡೆಯಲು ಕೇಂದ್ರ ವೀಕ್ಷಕರನ್ನು ಕಳುಹಿಸಲಾಗಿದೆ. ಗೆಹ್ಲೋಟ್ ಶಿಬಿರದಲ್ಲಿರುವ ಶಾಸಕರು ಈ ನಿರ್ಣಯಕ್ಕೆ ಸಹಿ ಹಾಕಲು ನಿರಾಕರಿಸಿದರು. ಗೆಹ್ಲೋಟ್ ನಿರ್ದೇಶನದ ಮೇರೆಗೆ ಶಾಸಕರು ಕೇಂದ್ರ ವೀಕ್ಷಕರನ್ನು ತಪ್ಪಿಸಿದ್ದಾರೆ ಎಂದು ದೆಹಲಿಯ ಪಕ್ಷದ ನಾಯಕತ್ವ ಭಾವಿಸುತ್ತಿದೆ ಎನ್ನಲಾಗಿದೆ.

ರಾಜಸ್ಥಾನ ಬಂಡಾಯವನ್ನು ಗಾಂಧಿ ಕುಟುಂಬ ಮತ್ತು ಪಕ್ಷದ ಕೇಂದ್ರ ನಾಯಕತ್ವದ ವಿರುದ್ಧ ಗೆಹ್ಲೋಟ್‌ರ ಬಹಿರಂಗ ಬಂಡಾಯವೆಂದೇ ನೋಡಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಗಾಗಿ ಪಕ್ಷ ಹುಡುಕಾಟ ಆರಂಭಿಸಿದೆ ಎಂದು ದೆಹಲಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನು ನಾಲ್ಕು ದಿನ ಬಾಕಿ ಇದ್ದು, ಅಧ್ಯಕ್ಷೀಯ ಚುನಾವಣೆಗೆ ನಾಮನಿರ್ದೇಶನಗಳು ಸೆಪ್ಟೆಂಬರ್ 30 ರಂದು ಮುಕ್ತಾಯಗೊಳ್ಳುತ್ತವೆ.

ಗೆಹ್ಲೋಟ್‌ಗೆ ನಿಷ್ಠರಾಗಿರುವ 90ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರಿಂದ ಭಾನುವಾರ ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ರದ್ದುಗೊಳಿಸಬೇಕಾಯಿತು. ಗೆಹ್ಲೋಟ್ ನಿಷ್ಠರಾದ ಶಾಂತಿ ಧರಿವಾಲ್ ಮತ್ತು ಮುಖ್ಯ ಸಚೇತಕ ಮಹೇಶ್ ಜೋಶಿ ಅವರನ್ನು ಹೈಕಮಾಂಡ್ ಪ್ರಮುಖ ನಾಯಕರಾಗಿ ನಿಯೋಜಿಸಿದೆ. ಸೋಮವಾರ ಮಧ್ಯಾಹ್ನ ಖರ್ಗೆ ಅವರು ತಂಗಿದ್ದ ಹೋಟೆಲ್‌ನಲ್ಲಿ ಗೆಹ್ಲೋಟ್ ಭೇಟಿಯಾದರು. ದೆಹಲಿಗೆ ತೆರಳುವ ಮುನ್ನ ಮಾತನಾಡಿದ್ದ ಖರ್ಗೆ, “ಕಾಂಗ್ರೆಸ್ ಅಧ್ಯಕ್ಷರ ನಿರ್ಧಾರದೊಂದಿಗೆ ಎಲ್ಲರೂ ಒಂದೇ ಬಣದಲ್ಲಿ ಇರಬೇಕಾಗುತ್ತದೆ. ಪಕ್ಷದ ಘಟಕದಲ್ಲಿ ಒಗ್ಗಟ್ಟು ಮತ್ತು ಶಿಸ್ತು ಇರಬೇಕು ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com