ಮನೆಯಿಂದ ಊಟ, ಔಷಧಿಗೆ ಒಪ್ಪಿಗೆ; ಹಾಸಿಗೆಗೆ ನೋ ಎಂದ ನ್ಯಾಯಾಲಯ: 14 ದಿನಗಳ ನ್ಯಾಯಾಂಗ ಬಂಧನಕ್ಕೆ ಸಂಜಯ್ ರಾವುತ್
ಮುಂಬೈನ 'ಪತ್ರಾ ಚಾಲ್' ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Published: 08th August 2022 02:51 PM | Last Updated: 08th August 2022 04:17 PM | A+A A-

ಸಂಜಯ್ ರಾವುತ್
ಮುಂಬೈ: ಮುಂಬೈನ 'ಪತ್ರಾ ಚಾಲ್' ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮನೆಯ ಆಹಾರ ಮತ್ತು ಔಷಧಿಗಳಿಗಾಗಿ ರಾವುತ್ ಮಾಡಿದ್ದ ಮನವಿಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ, ಮನೆಯಿಂದಲೇ ಹಾಸಿಗೆ ಒದಗಿಸುವಂತೆ ಕೇಳಿದ್ದ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದೆ. ಜೈಲು ಕೈಪಿಡಿಯ ನಿಯಮದಂತೆ ಜೈಲು ಅಧಿಕಾರಿಗಳು ಸಾಕಷ್ಟು ಹಾಸಿಗೆ ವ್ಯವಸ್ಥೆ ಮಾಡುತ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಗೋರೆಗಾಂವ್‌ನ ಉಪನಗರದಲ್ಲಿರುವ ಪತ್ರಾ ಚಾಲ್ (ಸಾಲು ವಠಾರ) ಮರುಅಭಿವೃದ್ಧಿಯಲ್ಲಿ ನಡೆದಿರುವ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ 60 ವರ್ಷದ ರಾವುತ್ ಅವರನ್ನು ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. ಇಂದು ಇ.ಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರ ಮುಂದೆ ಹಾಜರುಪಡಿಸಲಾಯಿತು.
ಇದನ್ನೂ ಓದಿ: ಸಂಜಯ್ ರಾವತ್ ಪತ್ನಿಗೆ ಜಾರಿ ನಿರ್ದೇಶನಾಲಯ ನೊಟೀಸ್; ರಾವತ್ ಇಡಿ ಬಂಧನದ ಅವಧಿ ವಿಸ್ತರಣೆ
ಫೆಡರಲ್ ತನಿಖಾ ಸಂಸ್ಥೆಯು ಸಂಜಯ್ ರಾವುತ್ ಅವರ ಕಸ್ಟಡಿಯನ್ನು ಮತ್ತಷ್ಟು ವಿಸ್ತರಿಸಲು ಬಯಸಲಿಲ್ಲ. ಹೀಗಾಗಿ ನ್ಯಾಯಾಧೀಶರು ರಾವುತ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಪತ್ರಾ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಮುಂಬೈನ ಹೌಸಿಂಗ್ ಡೆವಲಪ್‌ಮೆಂಟ್ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದಿಂದ ಸಂಜಯ ರಾವುತ್ ಹಾಗೂ ಅವರ ಕುಟುಂಬಕ್ಕೆ ₹1.06 ಕೋಟಿ ಸಿಕ್ಕಿದೆ ಎಂದು ಇ.ಡಿ ಆರೋಪಿಸಿದೆ. ಈ ವಿಚಾರವಾಗಿ ಸಂಜಯ್ ರಾವುತ್ ಅವರನ್ನು ಬಂಧಿಸಿರುವ ಇ.ಡಿ ವಿಚಾರಣೆ ನಡೆಸುತ್ತಿದೆ.