ಇನ್ನೊಂದು ತಿಂಗಳಲ್ಲಿ ಸರ್ಕಾರಿ ಉದ್ಯೋಗ ನೀಡುವ ದೊಡ್ಡ ರಾಜ್ಯವಾಗಲಿದೆ ಬಿಹಾರ: ಡಿಸಿಎಂ ತೇಜಸ್ವಿ ಯಾದವ್
ತಾವು ಅಧಿಕಾರದಲ್ಲಿ ಮುಂದುವರೆದರೆ, ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ಉದ್ಯೋಗ ಸೇರಿದಂತೆ ಹಲವು ವಿಷಯಗಳೆಡೆಗೆ ಗಮನ ಹರಿಸುವುದಾಗಿ ಉಪಮುಖ್ಯಮಂತ್ರಿ, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
Published: 12th August 2022 07:31 PM | Last Updated: 12th August 2022 07:41 PM | A+A A-

ತೇಜಸ್ವಿ ಯಾದವ್
ಪಾಟ್ನ: ಆಗಸ್ಟ್ 24 ಕ್ಕೆ ಬಿಹಾರದಲ್ಲಿ ಹೊಸ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದ್ದು, ಇದಕ್ಕೂ ಮುನ್ನ ಮಾತನಾಡಿರುವ ಉಪಮುಖ್ಯಮಂತ್ರಿ, ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ತಾವು ಅಧಿಕಾರದಲ್ಲಿ ಮುಂದುವರೆದರೆ, ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ಉದ್ಯೋಗ ಸೇರಿದಂತೆ ಹಲವು ವಿಷಯಗಳೆಡೆಗೆ ಗಮನ ಹರಿಸುವುದಾಗಿ ಹೇಳಿದ್ದಾರೆ.
"ನಾವು ಈಗ ಸರ್ಕಾರ ರಚಿಸಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗ ಮೊದಲಾದ ಯುವಪೀಳಿಗೆಯ ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸುವುದಕ್ಕೆ ಗಮನ ನೀಡುತ್ತೇವೆ. ಹಿಂದೂ-ಮುಸ್ಲಿಂ ವಿಷಯ, ಮಂದಿರ-ಮಸೀದಿಯ ವಿಷಯಗಳು ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಚರ್ಚೆಯಾಗುತ್ತಿತ್ತು. ಆಗ ಸಮಾಜದಲ್ಲಿ ದ್ವೇಷ ಮಾತ್ರ ಹರಡುತ್ತಿತ್ತು ಎಂದು ತೇಜಸ್ವಿ ಯಾದವ್ ಎಎನ್ಐ ಜೊತೆ ಮಾತನಾಡುತ್ತ ಹೇಳಿದ್ದಾರೆ.
ಇದನ್ನೂ ಓದಿ: ಇದು ನಿಜವಾದ 'ಮಹಾಘಟಬಂಧನ್'; ಡೀಲ್ ಅಲ್ಲ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
ನಿತೀಶ್ ಕುಮಾರ್ ಅವರ ಜೆಡಿ(ಯು) ಜೊತೆಗಿನ ಮೈತ್ರಿಯನ್ನು ಸಹಜ ಮೈತ್ರಿ ಎಂದು ಹೇಳಿದ್ದ ತೇಜಸ್ವಿ ಯಾದವ್, ಇದು ಡೀಲ್ ಅಲ್ಲ ಎಂದು ಹೇಳಿದ್ದಾರೆ.
ತಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಒಂದು ತಿಂಗಳ ಅವಧಿಯಲ್ಲಿ ಬಿಹಾರ ಸರ್ಕಾರಿ ನೌಕರಿ ನೀಡುವ ಅತಿ ಡೊಡ್ಡ ರಾಜ್ಯವಾಗಲಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.