ಗುಜರಾತ್ ವಿಧಾನಸಭಾ ಚುನಾವಣೆ 2022: ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭ, 788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ 2022ರ ಮೊದಲ ಹಂತದ ಮತದಾನ ಗುರುವಾರ ಆರಂಭವಾಗಿದ್ದು, ಈ ಹಂತದಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಮೋರ್ಬಿಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವುದು.
ಮೋರ್ಬಿಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವುದು.

ಅಹ್ಮದಾಬಾದ್: ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ 2022ರ ಮೊದಲ ಹಂತದ ಮತದಾನ ಗುರುವಾರ ಆರಂಭವಾಗಿದ್ದು, ಈ ಹಂತದಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

182 ಸ್ಥಾನಗಳ ವಿಧಾನಸಭೆಯಲ್ಲಿ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. 89 ಸ್ಥಾನಕ್ಕೆ 788 ಜನ ಸ್ಪರ್ಧೆ ಮಾಡಿದ್ದು, ಉಳಿದ 93 ಸ್ಥಾನಗಳಿಗೆ ಡಿ.5 ರಂದು ಮತದಾನ ನಡೆಯಲಿದೆ. ಡಿ.8 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಆಪ್ ಚುನಾವಣಾ ಕದನದಲ್ಲಿ ಹೋರಾಟ ಮಾಡುತ್ತಿವೆ.

ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ 19 ಜಿಲ್ಲೆಗಳ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಜರುಗಲಿದ್ದು, ಮತದಾನಕ್ಕೆ 34,324 ಬ್ಯಾಲೆಟ್ ಯೂನಿಟ್, 34,324 ಕಂಟ್ರೋಲ್ ಯೂನಿಟ್ ಮತ್ತು 38,749 ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗಿದೆ.

ನಗರ ಪ್ರದೇಶದ 9,014 ಹಾಗೂ ಗ್ರಾಮೀಣ ಪ್ರದೇಶದ 16,416 ಮತಗಟ್ಟೆಗಳು ಸೇರಿದಂತೆ 25,430 ಮತಗಟ್ಟೆಗಳು ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗದ ಆಯುಕ್ತರಾದ ಪಿ ಭಾರತಿ ತಿಳಿಸಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ 718 ಪುರುಷ ಅಭ್ಯರ್ಥಿಗಳು ಮತ್ತು 70 ಮಹಿಳಾ ಅಭ್ಯರ್ಥಿಗಳು ಆಗಿದ್ದು, ಒಟ್ಟಾರೆ 39 ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿವೆ.

89 ಸ್ಥಾನಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 2,39,76,670 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು ಮತದಾರರಲ್ಲಿ 1,24,33,362 ಪುರುಷ ಮತದಾರರು ಮತ್ತು 1,1,5,42,811 ಮಹಿಳಾ ಮತದಾರರು ಮತ್ತು 497 ತೃತೀಯ ಮತದಾರರು ನೋಂದಣಿಯಾಗಿದ್ದಾರೆ. 18ರಿಂದ 19 ವರ್ಷದೊಳಗಿನ ಒಟ್ಟು 5,75,560 ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಆಯುಕ್ತರು ಮಾಹಿತಿ ನೀಡಿದ್ದಾರೆ.

ಹಿರಿಯ ನಾಗರಿಕರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಹಂತದಲ್ಲಿ 99 ವರ್ಷಕ್ಕಿಂತ ಮೇಲ್ಪಟ್ಟ 4945 ಮತದಾರರು ಸಹ ಮತದಾನ ಮಾಡಲಿದ್ದಾರೆ. ಅಲ್ಲದೇ, 163 ಎನ್‌ಆರ್‌ಐಗಳು/ಎನ್‌ಆರ್‌ಜಿಗಳು ಮತ ಚಲಾಯಿಸಲು ಗುಜರಾತ್‌ಗೆ ತಲುಪಿದ್ದಾರೆ. ಇದರಲ್ಲಿ 125 ಪುರುಷರು ಮತ್ತು 38 ಮಹಿಳೆಯರು ಸೇರಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆ 14,382 ವಿಶೇಷ ಮತಗಟ್ಟೆಗಳು ಸ್ಥಾಪಿಸಲಾಗಿದೆ. ಅದರಲ್ಲಿ 3,311 ನಗರ ಪ್ರದೇಶದಲ್ಲಿ ಮತ್ತು 11,071 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ವಿಶೇಷ ಮತಗಟ್ಟೆಗಳಲ್ಲಿ 89 ಆದರ್ಶ ಮತಗಟ್ಟೆಗಳು, 89 ಅಂಗವಿಕಲರು ನಿರ್ವಹಿಸುವ ಮತಗಟ್ಟೆಗಳು, 89 ಪರಿಸರ ಸ್ನೇಹಿ ಮತಗಟ್ಟೆಗಳು, 611 ಸಖಿ ಮತಗಟ್ಟೆಗಳು, 18 ಮತಗಟ್ಟೆಗಳು ಯುವಕರು ಕಾರ್ಯನಿರ್ವಹಿಸುವ ಮತಗಟ್ಟೆಗಳು ಸಹ ಸೇರಿವೆ.

ಒಟ್ಟು 16,500 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಇದರಲ್ಲಿ ಸೌರಾಷ್ಟ್ರದ 5000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತಗಟ್ಟೆ ಸಿಬ್ಬಂದಿಯನ್ನೂ ದೊಡ್ಡ ಮಟ್ಟದ ನಿಯೋಜಿಸಲಾಗಿದೆ. ಒಟ್ಟಾರೆ 1,06,963 ಸಿಬ್ಬಂದಿ ಮೊದಲ ಹಂತದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಚುನಾವಣಾ ಮೇಲೆ ಪೊಲೀಸರು ಸಹ ಹದ್ದಿನ ಕಣ್ಣು ಇರಿಸಲಾಗಿದೆ. 50ಕ್ಕೂ ಹೆಚ್ಚು ಸಾಮಾನ್ಯ ವೀಕ್ಷಕರು, 20 ಪೊಲೀಸ್ ವೀಕ್ಷಕರು ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಪೊಲೀಸರು, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಬಿಜೆಪಿ ದಾಖಲೆಯ ಏಳನೇ ಅವಧಿಗೆ ಅಧಿಕಾರಕ್ಕೆ ಬರುವ ನಿರೀಕ್ಷೆಗಳಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ರಾಜ್ಯದಲ್ಲಿ ಭರ್ಜರಿ ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ನಡೆಸಿದ್ದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಅಸ್ಸಾಂ, ಗೋವಾ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಮನ್ಸುಖ್ ಮಾಂಡವಿಯಾ, ಪರ್ಷೋತ್ತಮ್ ರೂಪಾಲಾ, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಅವರು ಮೊದಲ ಹಂತದ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಮುಖಂಡರಾದ ಮನೋಜ್ ತಿವಾರಿ ಮತ್ತು ರವಿ ಕಿಶನ್ ಕೂಡ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಪಡೆಯಲು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com