ಉತ್ತರ ಪ್ರದೇಶ: ಅತ್ತೆ-ಮಾವ ಕೊಟ್ಟ 11 ಲಕ್ಷ ರೂ ವರದಕ್ಷಿಣೆ ವಾಪಸ್ ನೀಡಿ ಎಲ್ಲರ ಮನಗೆದ್ದ 'ಮಾದರಿ ಅಳಿಯ'!
ಅಪರೂಪದ ರೀತಿಯಲ್ಲಿ ಮದುವೆಯಲ್ಲಿ ವರದಕ್ಷಿಣೆಯಾಗಿ ಪಡೆದಿದ್ದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸುವ ಮೂಲಕ ಉತ್ತರ ಪ್ರದೇಶದ ವರನೊಬ್ಬ ಎಲ್ಲರಿಗೂ ಮಾದರಿಯಾಗಿದ್ದಾನೆ.
Published: 03rd December 2022 05:01 PM | Last Updated: 03rd December 2022 05:33 PM | A+A A-

ವರದಕ್ಷಿಣೆ ವಾಪಸ್ ನೀಡಿದ ವರ (ಸಾಂದರ್ಭಿಕ ಚಿತ್ರ)
ಮುಜಫರ್‌ನಗರ: ಅಪರೂಪದ ರೀತಿಯಲ್ಲಿ ಮದುವೆಯಲ್ಲಿ ವರದಕ್ಷಿಣೆಯಾಗಿ ಪಡೆದಿದ್ದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸುವ ಮೂಲಕ ಉತ್ತರ ಪ್ರದೇಶದ ವರನೊಬ್ಬ ಎಲ್ಲರಿಗೂ ಮಾದರಿಯಾಗಿದ್ದಾನೆ.
ಉತ್ತರ ಪ್ರದೇಶದ ಮುಜಫರ್‌ನಗರದ ತಿಟಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಲಖನ್ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆದಿತ್ತು. ಕಂದಾಯ ಅಧಿಕಾರಿ (ಲೇಖಪಾಲ್)ಯಾಗಿರುವ ವರ ಸೌರಭ್ ಚೌಹಾಣ್ ಮತ್ತು ನಿವೃತ್ತ ಸೇನಾ ಜವಾನನ ಮಗಳಾದ ವಧು ಪ್ರಿನ್ಸ್ ವಿವಾಹ ನಡೆದಿತ್ತು. ಈ ವೇಳೆ ಸ್ಥಳೀಯ ಸಂಪ್ರದಾಯದಂತೆ ವರನಿಗೆ ವಧುವಿನ ಪೋಷಕರು 11 ಲಕ್ಷ ರೂ. ಗಳನ್ನು ವರದಕ್ಷಿಣೆಯಾಗಿ ನೀಡಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ: ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಮೂಹಿಕ ಅತ್ಯಾಚಾರವೆಸಗಿ ತ್ರಿವಳಿ ತಲಾಖ್ ನೀಡಿದ ಪತಿ!
ಆದರೆ ಈ ಹಣವನ್ನು ಮತ್ತೆ ವಧುವಿನ ಪೋಷಕರಿಗೆ ವಾಪಸ್ ನೀಡಿದ ವರ ಸೌರಭ್ ಚೌಹಾಣ್ ಅದರ ಬದಲಿಗೆ ‘ಶಗುನ್’ ರೂಪದಲ್ಲಿ 1 ರೂ ನಾಣ್ಯವನ್ನು ವರದಕ್ಷಿಣೆಯಾಗಿ ಸ್ವೀಕರಿಸಿದ್ದಾರೆ. ವರನ ಈ ನಡೆ ಅಲ್ಲಿ ನೆರೆದಿದ್ದವರ ಮೆಚ್ಚುಗೆಗೆ ಕಾರಣವಾಯಿತು. ವರ ವರದಕ್ಷಿಣೆ ವಾಪಸ್ ಮಾಡುತ್ತಲೇ ಅಲ್ಲಿ ನೆರೆದಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
ಕಿಸಾನ್ ಮಜ್ದೂರ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಠಾಕೂರ್ ಪುರಾನ್ ಸಿಂಗ್ ಇದು ಸಕಾರಾತ್ಮಕ ಬದಲಾವಣೆಯ ಮೊದಲ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ವರನ ಈ ನಡೆ ಗ್ರಾಮದ ಇತರೆ ಯುವಕರಿಗೆ ಮಾದರಿಯಾಗಲಿ ಎಂದು ಗ್ರಾಮಸ್ಥ ಅಮರ್‌ಪಾಲ್ ಹೇಳಿದ್ದಾರೆ.