ತವಾಂಗ್ ಸಂಘರ್ಷ: 'ಇದು ಇನ್ನೂ 1962 ಅಲ್ಲ, ಯಾವುದೇ ರಾಷ್ಟ್ರ ಎದುರಿಸಲು ಭಾರತ ಸನ್ನದ್ಧವಾಗಿದೆ- ಚೀನಾಗೆ ಸಿಎಂ ಪೆಮಾ ಖಂಡು ಎಚ್ಚರಿಕೆ
ಇದಿನ್ನೂ 1962 ಅಲ್ಲ, ಭಾರತ ಇಂದು ಯಾವುದೇ ರಾಷ್ಟ್ರವನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ತವಾಂಗ್ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ ಚೀನಾಗೆ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಕಡಕ್ ಅವರು ಎಚ್ಚರಿಕೆ ನೀಡಿದ್ದಾರೆ.
Published: 14th December 2022 09:08 AM | Last Updated: 14th December 2022 01:54 PM | A+A A-

ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು
ನವದೆಹಲಿ: ಇದಿನ್ನೂ 1962 ಅಲ್ಲ, ಭಾರತ ಇಂದು ಯಾವುದೇ ರಾಷ್ಟ್ರವನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ತವಾಂಗ್ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ ಚೀನಾಗೆ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಕಡಕ್ ಅವರು ಎಚ್ಚರಿಕೆ ನೀಡಿದ್ದಾರೆ.
ತವಾಂಗ್ ಗಡಿ ಸಂಘರ್ಷ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಚೀನಾ ಗಡಿ ತಂಟೆ ಮಾಡಿದ ಯಾಂಗ್ಟನ್ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ನಾನು ಮತ್ತು ಯೋಧರು ಆ ಪ್ರದೇಶದ ಗ್ರಾಮಸ್ಥರನ್ನು ಭೇಟಿಯಾಗುತ್ತೇವೆ. ಗಡಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಯಾವುದೇ ಯತ್ನವನ್ನು ನಮ್ಮ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಲಿದೆ. ತಕ್ಕ ಉತ್ತರ ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ತು ಕಲಾಪ: ಭಾರತ-ಚೀನಾ ಸಂಘರ್ಷ ಕುರಿತು ಇಂದು ಮತ್ತೆ ಕಾಂಗ್ರೆಸ್ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡನೆ
ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಟ್ವೀಟ್ ಮಾಡಿರುವ ಪೆಮಾ ಖಂಡು ಅವರು, ಇದು 1962 ಅಲ್ಲ. ಯಾರಾದರೂ ಗಡಿ ನಿಯಮ ಉಲ್ಲಂಘಿಸಲು ಪ್ರಯತ್ನಿಸಿದರೆ, ನಮ್ಮ ವೀರ ಸೈನಿಕರು ತಕ್ಕ ಉತ್ತರ ನೀಡುತ್ತಾರೆ. ದೇಶದ ಜಾಗವನ್ನು ಅತಿಕ್ರಮಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ನಾವು ಸಿದ್ಧ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಈ ನಡುವೆ ಗಡಿ ಸಂಘರ್ಷ ಕುರಿತು ಚೀನಾ ಸರ್ಕಾರ ಇದೂವರೆಗೂ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಮಾತ್ರ, ಭಾರತದ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಎರಡೂ ಕಡೆಯಿಂದ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.