ದೆಹಲಿ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ: ಬಿಜೆಪಿ/ಆರ್‌ಎಸ್‌ಎಸ್ ದ್ವೇಷ ಹರಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ; ರಾಹುಲ್ ಗಾಂಧಿ

ಆರ್‌ಎಸ್‌ಎಸ್ ಅಥವಾ ಬಿಜೆಪಿಯು ದೇಶದಲ್ಲಿ ಭಯವನ್ನು ಹರಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರು ಈ ಭಯವನ್ನು ದ್ವೇಷವನ್ನಾಗಿ ಪರಿವರ್ತಿಸುತ್ತಾರೆ. ಆದರೆ, ಕಾಂಗ್ರೆಸ್ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶನಿವಾರ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯ ವೇಳೆ ಬೆಂಬಲಿಗರತ್ತ ಕೈಬೀಸಿದ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯ ವೇಳೆ ಬೆಂಬಲಿಗರತ್ತ ಕೈಬೀಸಿದ ರಾಹುಲ್ ಗಾಂಧಿ

ನವದೆಹಲಿ: ಆರ್‌ಎಸ್‌ಎಸ್ ಅಥವಾ ಬಿಜೆಪಿಯು ದೇಶದಲ್ಲಿ ಭಯವನ್ನು ಹರಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರು ಈ ಭಯವನ್ನು ದ್ವೇಷವನ್ನಾಗಿ ಪರಿವರ್ತಿಸುತ್ತಾರೆ. ಆದರೆ, ಕಾಂಗ್ರೆಸ್ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶನಿವಾರ ತಿಳಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ದೆಹಲಿ ಪ್ರವೇಶಿಸುತ್ತಿದ್ದಂತೆ ದೆಹಲಿ ಗಡಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ಅವರು ದ್ವೇಷವನ್ನು ಹರಡುತ್ತಾರೆ, ನಾವು ಪ್ರೀತಿಯನ್ನು ಹರಡುತ್ತೇವೆ ಮತ್ತು ಎಲ್ಲಾ ಭಾರತೀಯರನ್ನು ಅಪ್ಪಿಕೊಳ್ಳುತ್ತೇವೆ' ಎಂದರು.
'ಈ ಭಾರತ್ ಜೋಡೋ ಯಾತ್ರೆಯಲ್ಲಿ ಹಿಂದೂಸ್ತಾನ ಮತ್ತು 'ಮೊಹಬ್ಬತ್' (ಪ್ರೀತಿ) ಇದೆ. ಅದು ಯಾವುದೇ ಜಾತಿ, ಪಂಥ, ಧರ್ಮ, ಶ್ರೀಮಂತ ಅಥವಾ ಬಡವರನ್ನು ನೋಡುವುದಿಲ್ಲ ಮತ್ತು ಎಲ್ಲರನ್ನೂ ಪರಸ್ಪರ ಅಪ್ಪಿಕೊಳ್ಳುತ್ತದೆ' ಎಂದು ಅವರು ಹೇಳಿದರು.

'ಆರ್‌ಎಸ್‌ಎಸ್ ಅಥವಾ ಬಿಜೆಪಿಯ ಎಲ್ಲಾ ನೀತಿಗಳು ಭಯವನ್ನು ಹರಡುವುದಾಗಿದೆ. ಪ್ರತಿಯೊಬ್ಬರೂ ಭಯವನ್ನು ಹೊಂದಿರಬೇಕೆಂದು ಅವರು ಬಯಸುತ್ತಾರೆ ಮತ್ತು ಅವರು ಈ 'ದರ್' ಅನ್ನು 'ನಫ್ರತ್' (ಭಯವನ್ನು ದ್ವೇಷವಾಗಿ) ಪರಿವರ್ತಿಸುತ್ತಾರೆ. ‘ಡರ್’ ಇಲ್ಲದಿದ್ದರೆ ಅದು ‘ನಫ್ರತ್’ ಆಗಿ ಪರಿವರ್ತನೆಯಾಗುವುದಿಲ್ಲ. ‘ಡರೋ ಮತ್’ ಎನ್ನುತ್ತೇವೆ. ನಾವು ಪ್ರೀತಿಯನ್ನು ಹರಡಿದ್ದೇವೆ. ನಾವು ಎಲ್ಲಾ ಭಾರತೀಯರನ್ನು ಅಪ್ಪಿಕೊಳ್ಳುತ್ತೇವೆ' ಎಂದು ಅವರು ಹೇಳಿದರು.

ಬಿಜೆಪಿ/ಆರ್‌ಎಸ್‌ಎಸ್ ದ್ವೇಷವನ್ನು ಹರಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ ಮತ್ತು ಪ್ರೀತಿಯ ಮೂಲಕ ಜನರನ್ನು ಒಗ್ಗೂಡಿಸುವ ಭಾರತಕ್ಕೆ ವಿಭಿನ್ನ ಮಾರ್ಗವನ್ನು ತೋರಿಸುವ ಗುರಿಯನ್ನು ಈ ಯಾತ್ರೆ ಹೊಂದಿದೆ ಎಂದರು.

'ಈ ದ್ವೇಷದ ಮಾರುಕಟ್ಟೆಯಲ್ಲಿ, ಸಮಾಜದಲ್ಲಿ ಪ್ರೀತಿಯನ್ನು ಪಸರಿಸಲು ಅಂಗಡಿ ತೆರೆಯುತ್ತೇವೆ ಎಂದು ಕೆಲ ದಿನಗಳ ಹಿಂದೆ ಹೇಳಿದ್ದೆ, ಪ್ರತಿಯೊಬ್ಬ ಭಾರತೀಯನೂ ಪ್ರೀತಿಯನ್ನು ಪಸರಿಸಲು ಚಿಕ್ಕದೊಂದು ಅಂಗಡಿ ತೆರೆಯಬೇಕು. ಈ ಯಾತ್ರೆಯಲ್ಲಿ ಯಾವುದೇ ದ್ವೇಷವಿಲ್ಲ ಎಂಬುದನ್ನು ನೀವು ನೋಡಿದ್ದೀರಿ. ಬೆರಳೆಣಿಕೆಯಷ್ಟು ಜನರು ಮಾತ್ರ ಈ ದ್ವೇಷವನ್ನು ಹರಡುತ್ತಿದ್ದಾರೆ. ಆದರೆ, ಹೆಚ್ಚಿನ ಭಾರತೀಯರು ಜನರನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತಾರೆ' ಎಂದು ಆರೋಪಿಸಿದರು.

ನಾನು ಕನ್ಯಾಕುಮಾರಿಯಿಂದ ಪಾದಯಾತ್ರೆ ಮಾಡಿದ್ದೇನೆ ಮತ್ತು ದೇಶದಾದ್ಯಂತ ಪ್ರೀತಿ ಮಾತ್ರ ಇದೆ ಮತ್ತು ದ್ವೇಷವಿಲ್ಲ ಎಂಬು ನಾನು ಹೇಳಬಲ್ಲೆ. ಅದನ್ನು ಮಾಧ್ಯಮಗಳು ಕೂಡ ತೋರಿಸುತ್ತಿವೆ. ಈ ಯಾತ್ರೆಯು ನಿರುದ್ಯೋಗ, ಬೆಲೆ ಏರಿಕೆ, ಭಯ ಮತ್ತು ದ್ವೇಷದ ವಿರುದ್ಧ ನಡೆಯುತ್ತಿದೆ. ದೇಶವನ್ನು ಒಡೆಯಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಮತ್ತು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

3,000 ಕಿಮೀ ನಡೆದರೂ ಕೂಡ ನಾನು ದಣಿದಿಲ್ಲ ಮತ್ತು ಅದಕ್ಕೆ ಕಾರಣ 'ನೀವು ನಿಮ್ಮ ಪ್ರೀತಿ ಮತ್ತು ಶಕ್ತಿಯನ್ನು ನೀಡಿರುವುದು. ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತ ನಮಗೆ ಸಹಾಯ ಮಾಡಿದೆ ಮತ್ತು ಅದನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.

ಭಾರತ್ ಜೋಡೋ ಯಾತ್ರೆಯು ಹರಿಯಾಣದಿಂದ ಹೊರಟು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತಿದ್ದಂತೆ ದೆಹಲಿಯ ಬಾದರ್‌ಪುರ ಗಡಿಯಲ್ಲಿ ರಾಹುಲ್ ಗಾಂಧಿಯವರಿಗೆ ಪಕ್ಷದ ಸ್ಥಳೀಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಆತ್ಮೀಯ ಸ್ವಾಗತವನ್ನು ಕೋರಿದರು.

ತುಂಬಾ ಪ್ರೀತಿಯನ್ನು ನೀಡಿದ್ದಕ್ಕಾಗಿ ರಾಹುಲ್ ಗಾಂದಿ ಹರಿಯಾಣದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಯಾತ್ರೆಯು ರಾಷ್ಟ್ರ ರಾಜಧಾನಿಯಲ್ಲಿ ಬೆಳಗ್ಗೆ 11 ಗಂಟೆಗೆ ಆಶ್ರಮ ಚೌಕ್‌ನಲ್ಲಿ ಸ್ಥಗಿತಗೊಳ್ಳುತ್ತದೆ ಮತ್ತು ಮಧ್ಯಾಹ್ನ 1 ಗಂಟೆಗೆ ಮತ್ತೆ ತನ್ನ ಪ್ರಯಾಣವನ್ನು ಪುನರಾರಂಭಿಸುತ್ತದೆ. ಮಥುರಾ ರಸ್ತೆ, ಇಂಡಿಯಾ ಗೇಟ್ ಮತ್ತು ಐಟಿಒ ಮೂಲಕ ಪ್ರಯಾಣಿಸಿದ ನಂತರ, ಕೆಂಪುಕೋಟೆಯಲ್ಲಿ ನಿಲ್ಲಲಿದೆ.

ಯಾತ್ರೆಯು ಒಂಬತ್ತು ದಿನಗಳ ವರ್ಷಾಂತ್ಯದ ವಿರಾಮವನ್ನು ತೆಗೆದುಕೊಳ್ಳುತ್ತದೆ ಮತ್ತು ಜನವರಿ 3 ರಂದು ದೆಹಲಿಯಿಂದ ಪುನರಾರಂಭಗೊಳ್ಳುತ್ತದೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಇದುವರೆಗೆ ಒಂಬತ್ತು ರಾಜ್ಯಗಳಲ್ಲಿ ಸಂಚರಿಸಿದ್ದು, ಜನವರಿ ಅಂತ್ಯದ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com