
ಸಂಗ್ರಹ ಚಿತ್ರ
ನವದೆಹಲಿ: ಸುಮಾರು 80 ಮಂದಿಯ ಸಾವಿಗೆ ಕಾರಣವಾದ ಬಿಹಾರದ ನಕಲಿ ಮದ್ಯ ದುರಂತ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಆರೋಪಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ರಾಮ್ ಬಾಬು ಮಹ್ತೋ ಎಂದು ಗುರುತಿಸಲಾಗಿದ್ದು, ದೆಹಲಿ ಪೊಲೀಸರ ಅಪರಾಧ ವಿಭಾಗದ ಪೊಲೀಸರು ನಗರದ ದ್ವಾರಕಾ ಪ್ರದೇಶದಿಂದ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಸಿಂಗ್ ಯಾದವ್ ಅವರು ಮಾತನಾಡಿ, ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ರಾಮ್ ಬಾಬು ಮಹ್ತೋ ತಲೆಮರೆಸಿಕೊಂಡಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ಈ ಸಂಬಂಧ ಬಿಹಾರ ರಾಜ್ಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗಿತ್ತು. ರಾಮ್ ಬಾಬು ಮಹ್ತೋ ಪ್ರಕರಣದ ಮೋಸ್ಟ್ ವಾಂಟೆಡ್ ವ್ಯಕ್ಯಿಯಾಗಿದ್ದ. ಆಗಾಗ ಆರೋಪಿ ಸ್ಥಳ ಬದಲಾಯಿಸುತ್ತಿದ್ದರಿಂದ ಈಗ ಬಿಹಾರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
ಬಳಿಕ ಪೊಲೀಸರ ತಂಡ ರಚಿಸಿ, ಹುಡುಕಾಟ ನಡೆಸಲು ಮುಂದಾಗಲಾಗಿತ್ತು. ಇದರಂತೆ ದ್ವಾರಕಾ ಪ್ರದೇಶದ ಬಳಿ ಆರೋಪಿಯನ್ನು ಬಂಧಿಸಿದೆವು ಎಂದು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆರೋಪಿ ಬಂಧನ ಕುರಿತ ಮಾಹಿತಿಯನ್ನು ಬಿಹಾರ ಪೊಲೀಸರೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.