ಮಂಕಿಪಾಕ್ಸ್ ಭೀತಿ ಬೆನ್ನಲ್ಲೇ ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಆಫ್ರಿಕನ್ 'ಹಂದಿ ಜ್ವರ' ಪತ್ತೆ

ನೆರೆಯ ಕೇರಳದಲ್ಲಿ ದೇಶದ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇತ್ತ ದೇಶದಲ್ಲಿ ಮತ್ತೆ  'ಹಂದಿಜ್ವರ' ಭೀತಿ ಎದುರಾಗಿದ್ದು, ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಆಫ್ರಿಕನ್ ಹಂದಿಜ್ವರ ಪ್ರಕರಣಗಳು ವರದಿಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನೆರೆಯ ಕೇರಳದಲ್ಲಿ ದೇಶದ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇತ್ತ ದೇಶದಲ್ಲಿ ಮತ್ತೆ  'ಹಂದಿಜ್ವರ' ಭೀತಿ ಎದುರಾಗಿದ್ದು, ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಆಫ್ರಿಕನ್ ಹಂದಿಜ್ವರ ಪ್ರಕರಣಗಳು ವರದಿಯಾಗಿವೆ.

ಕೇರಳದ ವಯನಾಡ್ ಜಿಲ್ಲೆಯ ಫಾರ್ಮ್‌ನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ವರದಿಯಾಗಿದೆ ಎಂದು ರಾಜ್ಯದ ಪಶುಸಂಗೋಪನಾ ಸಚಿವ ಜೆ ಚಿಂಚುರಾಣಿ ಶುಕ್ರವಾರ ಹೇಳಿದ್ದು, ಇಲ್ಲಿಯವರೆಗೆ ಆಫ್ರಿಕನ್ ಹಂದಿ ಜ್ವರದ ಯಾವುದೇ ಅಧಿಕೃತ ಸಂಖ್ಯೆಗಳು ದೃಢಪಟ್ಟಿರಲಿಲ್ಲ. ಕೇರಳದಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸೋಂಕು ಪತ್ತೆ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್)ವು ಹಂದಿಗಳಲ್ಲಿ ಜ್ವರ, ವಾಕರಿಕೆ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ. ಈ ಹಿಂದೆ ಶಂಕೆ ಮೇರೆಗೆ ಸ್ಯಾಂಪಲ್ ಅನ್ನು ಪುಣೆಗೆ ರವಾನೆ ಮಾಡಲಾಗಿತ್ತು. ಇದರ ಫಲಿತಾಂಶ ಇದೀಗ ಲಭ್ಯವಾಗಿದ್ದು, ಜಿಲ್ಲೆಯ ಫಾರ್ಮ್‌ನಲ್ಲಿ ಹಂದಿಗಳಲ್ಲಿ ರೋಗ ದೃಢಪಟ್ಟಿರುವು ಖಚಿತವಾಗಿದೆ.

ಉತ್ತರ ಪ್ರದೇಶದಲ್ಲೂ ಹಂದಿಜ್ವರ ಸೋಂಕು
ಕೇರಳ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಈ ಹಂದಿ ಜ್ವರ ಸೋಂಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್‌ಐ) ಜಂಟಿ ನಿರ್ದೇಶಕ ಡಾ.ಪಿ.ಸಿಂಗ್ ಅವರು, ಉತ್ತರ ಪ್ರದೇಶದ ಬರೇಲಿಯ ನವಾಬ್‌ಗಂಜ್ ತಹಸಿಲ್‌ನ ಭಾದ್ಸರ್ ದಾಂಡಿಯಾ ಗ್ರಾಮದ ನಿವಾಸಿ ಅನಿಲ್ ಕುಮಾರ್ ಅವರ ಹಂದಿ ಈ ಕಾಯಿಲೆಯಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. 

ಕೆಲವು ದಿನಗಳ ಹಿಂದೆ, ಕುಮಾರ್ ಅವರ ಹಂದಿಗೆ ತೀವ್ರ ಜ್ವರವಿತ್ತು ಮತ್ತು ತಿನ್ನುವುದು ಮತ್ತು ಕುಡಿಯುವುದನ್ನು ಅದು ನಿಲ್ಲಿಸಿತ್ತು. ಕುಮಾರ್ ನಂತರ ಸತ್ತ ಹಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಅದರ ಫಲಿತಾಂಶದಲ್ಲಿ ರೋಗ ದೃಢಪಟ್ಟಿತ್ತು. ಐವಿಆರ್‌ಐ ಪರವಾಗಿ ಮುಖ್ಯ ಪಶುವೈದ್ಯಾಧಿಕಾರಿಗೆ ಪತ್ರವನ್ನು ಕಳುಹಿಸಲಾಗಿದ್ದು, ಎಚ್ಚರಿಕೆ ಮತ್ತು ಸಲಹೆಯನ್ನು ನೀಡಲು ಅಧಿಕಾರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸೋಂಕು ಮೊದಲು 1920 ರಲ್ಲಿ ಆಫ್ರಿಕಾದ ಪ್ರಾಣಿಗಳಲ್ಲಿ ಪತ್ತೆಯಾಗಿತ್ತು.

ಅಸ್ಸಾಂನಲ್ಲಿ ಮೊದಲ ಪ್ರಕರಣ
ASF ನ ಪ್ರಕರಣಗಳು ಭಾರತದಲ್ಲಿ ಮೊದಲ ಬಾರಿಗೆ ಮೇ 2020 ರಲ್ಲಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಬಳಿಕ ಈ ಹಿಂದೆ ಜುಲೈ ಆರಂಭದಲ್ಲಿ, ಉತ್ತರಾಖಂಡ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರದ ಪ್ರಕರಣಗಳು ವರದಿಯಾಗಿತ್ತು. ಅಂತೆಯೇ ಈ ತಿಂಗಳ ಆರಂಭದಲ್ಲಿ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾ ಎಎಸ್ಎಫ್ ವರದಿ ಮಾಡಿದ್ದವು. ಏಪ್ರಿಲ್‌ನಲ್ಲಿ, ತ್ರಿಪುರಾದಲ್ಲಿ ಅಜ್ಞಾತ ಕಾರಣಗಳಿಂದಾಗಿ ಒಟ್ಟು 63 ಪ್ರೌಢ ಹಂದಿಗಳು ಸಾವನ್ನಪ್ಪಿದವು. ಇದೇ ಫಾರ್ಮ್ ನಲ್ಲಿ 265 ಬಲಿತ ಹಂದಿಗಳು ಮತ್ತು 185 ಹಂದಿ ಮರಿಗಳು ಇದ್ದವು. ಇದು ಭಾರಿ ಆತಂಕ ಮೂಡಿಸಿತ್ತು. 

ಲಸಿಕೆ ಇಲ್ಲದ ರೋಗ: ಆತಂಕ ಹೆಚ್ಚಳ
ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದ್ದು, ಇದಕ್ಕೆ ಈ ವರೆಗೂ ಯಾವುದೇ ರೀತಿಯ ಲಸಿಕೆ ಅಭಿವೃದ್ಧಿ ಪಡಿಸಲಾಗಿಲ್ಲ. ಹಂದಿ ಮಾಂಸವನ್ನು ಸೇವಿಸುವುದನ್ನು ತಪ್ಪಿಸುವಂತೆ ಕೇರಳ ಸರ್ಕಾರವು ನಿವಾಸಿಗಳನ್ನು ಒತ್ತಾಯಿಸಿದೆ. ಈ ಹೆಮರಾಜಿಕ್ ರೋಗವು ಮನುಷ್ಯರಿಗೆ ಹಾನಿಕಾರಕವಲ್ಲ ಆದರೆ ಹಂದಿಗಳಿಗೆ ಮಾರಕವಾಗಿದೆ. ಪ್ರಸ್ತುತ ಈ ASF ಪ್ರಪಂಚದಾದ್ಯಂತ ಹರಡುವುದನ್ನು ಮುಂದುವರೆಸಿದ್ದು, ಇದು ಹಂದಿ ಆರೋಗ್ಯ ಮತ್ತು ಸಾಕಾಣಿಕಾ ಉದ್ಯಮಕ್ಕೆ ಬೆದರಿಕೆ ಹಾಕುತ್ತಿದೆ. ಈ ರೋಗವು ಏಷ್ಯಾ, ಕೆರಿಬಿಯನ್, ಯುರೋಪ್ ಮತ್ತು ಪೆಸಿಫಿಕ್‌ನಾದ್ಯಂತ ಅನೇಕ ದೇಶಗಳನ್ನು ತಲುಪಿದ್ದು, ಇದು ದೇಶೀಯ ಮತ್ತು ಕಾಡು ಹಂದಿಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕವಾಗಿ, 2005 ರಿಂದ, ASF ಒಟ್ಟು 73 ದೇಶಗಳಲ್ಲಿ ವರದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com