ಹೈದರಾಬಾದ್: ಕೊರೋನಾ ಸೋಂಕು ಬೆನ್ನಲ್ಲೇ ಇಡೀ ವಿಶ್ವಕ್ಕೇ ಭೀತಿ ಹುಟ್ಟಿಸಿರುವ ಮಂಕಿಪಾಕ್ಸ್ ಸೋಂಕು ಇದೀಗ ತೆಲಂಗಾಣಕ್ಕೂ ಒಕ್ಕರಿಸಿರುವ ಶಂಕೆ ವ್ಯಕ್ತವಾಗಿದ್ದು, ಕುವೈತ್ ನಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಹೌದು.. ವಿಶ್ವವನ್ನೇ ನಡುಗಿಸುವ ಮಂಗನ ಕಾಯಿಲೆ ಭಾರತಕ್ಕೂ ವ್ಯಾಪಿಸಿದ್ದು, ಈಗಾಗಲೇ ಕೇರಳಗದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇಂದು ದೆಹಲಿಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ತೆಲಂಗಾಣದಲ್ಲೂ ಮಾರಕ ಸೋಂಕಿನ ಭೀತಿ ಆರಂಭವಾಗಿದೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ 40 ವರ್ಷದ ನಿವಾಸಿಯೊಬ್ಬರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಶಂಕಿತ ವ್ಯಕ್ತಿಗೆ ಪ್ರಯಾಣ ಇತಿಹಾಸವಿದ್ದು, ಈ ಹಿಂದೆ ಅವರು ಕುವೈತ್ ಗೆ ತೆರಳಿ ವಾಪಸಾಗಿದ್ದರು. ಅವರಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ಪ್ರಸ್ತುತ ಪ್ರತ್ಯೇಕವಾಗಿರಿಸಲಾಗಿದೆ. ಅಂತೆಯೇ ಅವರ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ಪ್ರತ್ಯೇಕವಾಗಿರಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಆಸ್ಪತ್ರೆಯಿಂದ ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದ್ದು, ವೈದ್ಯರು ಈ ತಿಂಗಳ 20 ರಿಂದ ಅವರನ್ನು ನಿಗಾದಲ್ಲಿ ಇರಿಸಿದ್ದಾರೆ. ಶಂಕಿತ ವ್ಯಕ್ತಿಗೆ ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ, ವ್ಯಕ್ತಿಯಿಂದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ.
ಮಂಕಿಪಾಕ್ಸ್ ಸಿಡುಬು ಕುಟುಂಬದ ವೈರಲ್ ಕಾಯಿಲೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಈ ರೋಗವು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ, ವಿಶೇಷವಾಗಿ ಇಲಿಗಳು, ಉಣ್ಣೆ ಮತ್ತು ಜೀರುಂಡೆಗಳಂತಹ ಜೀವಿಗಳಿಂದ ಇದು ಮನುಷ್ಯರಿಗೆ ವ್ಯಾಪಿಸುತ್ತದೆ. ಆಂಧ್ರ ಪ್ರದೇಶದ ವಿಜಯವಾಡಕ್ಕೂ ಮಂಕಿ ಪಾಕ್ಸ್ ಪ್ರವೇಶಿಸಿದೆ. ಮಗುವೊಂದರಲ್ಲಿ ರೋಗಲಕ್ಷಣಗಳಿವೆ ಎಂದು ವೈದ್ಯರು ಶಂಕಿಸಿದ್ದಾರೆ. ಅವರ ಕುಟುಂಬ ಇತ್ತೀಚೆಗೆ ದುಬೈನಿಂದ ಬಂದಿತ್ತು. ಆದರೆ ಕೆಲವು ದಿನಗಳ ನಂತರ, ಕುಟುಂಬದ ಮಗುವಿನ ದೇಹದಲ್ಲಿ ದದ್ದು ಕಾಣಿಸಿಕೊಂಡಿತು ಮತ್ತು ವೈದ್ಯರು ಇದನ್ನು ಮಂಕಿಪಾಕ್ಸ್ ಎಂದು ಶಂಕಿಸಿದ್ದಾರೆ.
Advertisement