ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಮತ್ತೊಂದು ಸಂಕಷ್ಟ; ರಾಮ, ರಾವಣನ ಚಿತ್ರಣಕ್ಕೆ ವಿಎಚ್‌ಪಿ ಆಕ್ಷೇಪ

‘ಆದಿಪುರುಷ’ ಚಿತ್ರದ ಟೀಸರ್‌ನಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಚಿತ್ರಣವು ‘ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಿದೆ’ ಎಂದು ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿದೆ.
ಆದಿಪುರುಷ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್
ಆದಿಪುರುಷ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್

ಸಂಭಾಲ್: ‘ಆದಿಪುರುಷ’ ಚಿತ್ರದ ಟೀಸರ್‌ನಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಚಿತ್ರಣವು ‘ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್, ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು  ಬುಧವಾರ ಎಚ್ಚರಿಕೆ ನೀಡಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಭಾಲ್ ಘಟಕದ ಪ್ರಚಾರ ಪ್ರಮುಖ್ ಅಜಯ್ ಶರ್ಮಾ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಆದಿಪುರುಷ’ದಲ್ಲಿ ಭಗವಾನ್ ರಾಮ, ರಾವಣ ಮತ್ತು ಲಕ್ಷ್ಮಣರನ್ನು ಚಿತ್ರಿಸಿದ ರೀತಿ ಹಿಂದೂ ಧರ್ಮವನ್ನು ಅಣಕಿಸುವಂತಿದೆ. ಈ ಮೂಲಕ ಹಿಂದೂ ಸಮಾಜದ ಮೌಲ್ಯಗಳನ್ನು ಅಪಹಾಸ್ಯ ಮಾಡಲಾಗಿದೆ. ಇದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು.

ಆದಿಪುರುಷ ಸಿನಿಮಾದಲ್ಲಿ ಭಗವಾನ್ ರಾಮನಾಗಿ ನಟ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

'ರಾವಣನನ್ನು ಚಿತ್ರಿಸಿರುವ ರೀತಿಯು ರಾಮಾಯಣ ಮತ್ತು ಸಂಬಂಧಿತ ಧಾರ್ಮಿಕ ಗ್ರಂಥಗಳಿಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ವಿಎಚ್‌ಪಿ ಅವಕಾಶ ನೀಡುವುದಿಲ್ಲ' ಎಂದು ಶರ್ಮಾ ಹೇಳಿದರು.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಎಚ್‌ಪಿ ನಾಯಕ, 'ಮಂಡಳಿಯು ಮನಬಂದಂತೆ ಮತ್ತು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ಮಂಡಳಿಯು ತನ್ನ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ಸರ್ಕಾರ ಅದನ್ನು ವಿಸರ್ಜಿಸಬೇಕು' ಎಂದು ಹೇಳಿದರು.

ಓಂ ರಾವುತ್ ನಿರ್ದೇಶನದ ಈ ಚಿತ್ರದ 1.46 ನಿಮಿಷಗಳ ಟೀಸರ್ ಅನ್ನು ಭಾನುವಾರ ಅಯೋಧ್ಯೆಯಲ್ಲಿ ಬಿಡುಗಡೆ ಮಾಡಲಾಯಿತು. ಇದಾದ ಕೆಲವೇ ಗಂಟೆಗಳಲ್ಲಿ #BoycottAdipurush ಮತ್ತು #BanAdipurush ನಂತಹ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಗ್ ಆದವು.

ಗಡ್ಡ, ಉಗ್ರ ಕಣ್ಣುಗಳು ಮತ್ತು ವಿಶೇಷ ಕೇಶಾಲಂಕಾರದೊಂದಿಗೆ ಚಿತ್ರದಲ್ಲಿನ ರಾವಣ ಅನಾಗರಿಕತೆಯ ವ್ಯಕ್ತಿತ್ವವನ್ನು ತೋರುತ್ತಾನೆ ಎಂದು ದೂರಲಾಗಿದೆ. ರಾವಣನನ್ನು ಸ್ಪಷ್ಟವಾಗಿ ಇಸ್ಲಾಮೀಕರಣಗೊಳಿಸಲಾಗಿದೆ ಎಂದು ಅನೇಕರು ದೂರಿದ್ದಾರೆ. ಗಡ್ಡ, ಮೀಸೆ ಇಲ್ಲದ, ಚರ್ಮದ ಬಟ್ಟೆಯನ್ನು ಧರಿಸಿರುವ ಹನುಮಂತನ ಚಿತ್ರಣವೂ ಟೀಕೆಗೆ ಗುರಿಯಾಗಿದೆ.

ಚಿತ್ರವು ಹಿಂದೂಗಳ ಭಾವನೆಗಳ ಮೇಲೆ ದಾಳಿ ಮಾಡಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಹಿಂದೂ ಧಾರ್ಮಿಕ ವ್ಯಕ್ತಿಗಳನ್ನು 'ತಪ್ಪಾದ' ರೀತಿಯಲ್ಲಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com