ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಗೆ ಮತ್ತೊಂದು ಶಾಕ್; ಸರ್ಕಾರಿ ನಿವಾಸ ತೊರೆಯುವಂತೆ ನೋಟಿಸ್!
ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ಕೂಡಲೇ ಸರ್ಕಾರಿ ನಿವಾಸ ತೊರೆಯುವಂತೆ ನೋಟಿಸ್ ಜಾರಿ ಮಾಡಿದೆ.
Published: 21st October 2022 04:00 PM | Last Updated: 21st October 2022 04:00 PM | A+A A-

ಮೆಹಬೂಬಾ ಮುಫ್ತಿ
ಶ್ರೀನಗರ: ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ಕೂಡಲೇ ಸರ್ಕಾರಿ ನಿವಾಸ ತೊರೆಯುವಂತೆ ನೋಟಿಸ್ ಜಾರಿ ಮಾಡಿದೆ.
ಭಾರೀ ಭದ್ರತೆ ಇರುವ ಗುಪ್ಕಾರ್ ಪ್ರದೇಶದಲ್ಲಿರುವ ಸರ್ಕಾರಿ ಬಂಗಲೆಯನ್ನು ತೊರೆಯುವಂತೆ ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಜಮ್ಮು ಮತ್ತು ಕಾಶ್ಮೀರದ ಎಸ್ಟೇಟ್ ಇಲಾಖೆಯು ನೋಟಿಸ್ ನೀಡಿದೆ. ಅವರು ಉಳಿದುಕೊಂಡಿರುವ ಫೇರ್‌ವ್ಯೂ ನಿವಾಸಕ್ಕೆ ಬದಲಾಗಿ ಪರ್ಯಾಯ ವಸತಿ ಸೌಲಭ್ಯ ಒದಗಿಸಿಕೊಡುವುದಾಗಿ ಇಲಾಖೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಬಂಧಿತ ಉಗ್ರನ ಸಾವಿನ ತನಿಖೆಗೆ ಮೆಹಬೂಬಾ ಮುಫ್ತಿ ಆಗ್ರಹ!
ಜಮ್ಮು ಮತ್ತು ಕಾಶ್ಮೀರದ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ಶಾಶ್ವತ ವಸತಿ ಸೌಕರ್ಯ ಒದಗಿಸಲಾಗುತ್ತಿತ್ತು. ಆದರೆ, ಭಾರತ ಸರ್ಕಾರವು ರಾಜ್ಯದ ಕಾನೂನಿಗೆ ತಿದ್ದುಪಡಿ ತಂದ ಬಳಿಕ, ಈ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಗುಲಾಂ ನಬಿ ಅಜಾದ್ ಅವರು 2020ರಲ್ಲೇ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಆದಾಗ್ಯೂ, ಮುಫ್ತಿ ಅವರು ಗುಪ್ಕಾರ್ ರಸ್ತೆಯಲ್ಲಿರುವ ಐಷಾರಾಮಿ ನಿವಾಸದಲ್ಲಿಯೇ ಉಳಿದುಕೊಂಡಿದ್ದಾರೆ. ಇದೀಗ ಅವರಿಗೆ ನೋಟಿಸ್ ಜಾರಿ ಮಾಡಿ ನಿವಾಸ ತೊರೆಯುವಂತೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: 'ಭಾರತ್ ಜೋಡೋ ಯಾತ್ರೆ': ರಾಹುಲ್ ಗಾಂಧಿಯನ್ನು ಶ್ಲಾಘಿಸಿದ ಮೆಹಬೂಬಾ ಮುಫ್ತಿ
ತಮಗೆ ನೋಟಿಸ್ ಬಂದಿರುವ ವಿಚಾರವನ್ನು ಮುಫ್ತಿ ಖಚಿತಪಡಿಸಿದ್ದು, ಮೆಹಬೂಬಾ ಅವರ ತಂದೆ ಮುಫ್ತಿ ಮುಹಮ್ಮದ್ ಸಯೀದ್ ಅವರು 2002ರಿಂದ 2005ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು. ಮುಫ್ತಿ ನೇತೃತ್ವದ ಪಿಡಿಪಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಣಿವೆಯಲ್ಲಿ ಮಾರ್ಚ್ 2015ರಿಂದ 2018ರ ಜೂನ್ ವರೆಗೆ ಅಧಿಕಾರದಲ್ಲಿತ್ತು. ಆಗಿನಿಂದಲೂ ಮುಫ್ತಿ ಕುಟುಂಬ ಈ ನಿವಾಸದಲ್ಲಿ ವಾಸವಾಗಿದೆ. ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, 'ನಾನು ಸ್ವಂತ ನಿವಾಸವನ್ನು ಹೊಂದಿಲ್ಲ. ಬೇರೆ ಎಲ್ಲಿ ಉಳಿಯಲಿ. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾನೂನು ತಂಡದ ಸಲಹೆ ಪಡೆಯುತ್ತೇನೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗೃಹಬಂಧನದಲ್ಲಿ ಇರಿಸಲಾಗಿದೆ ಎಂದ ಮೆಹಬೂಬಾ ಮುಫ್ತಿ; ಯಾವುದೇ ನಿರ್ಬಂಧಗಳಿಲ್ಲ ಎಂದ ಪೊಲೀಸರು
ದೇಶದ ಇತರ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಅಧಿಕಾರಾವಧಿ ಮುಗಿದ ಬಳಿಕ ಅಧಿಕೃತ ನಿವಾಸವನ್ನು ತೊರೆಯುತ್ತಾರೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯ ಕಾರಣದಿಂದ, ಸರ್ಕಾರಿ ನಿವಾಸದಲ್ಲಿಯೇ ಉಳಿದುಕೊಳ್ಳುವ ಅವಕಾಶವಿತ್ತು. ಹೆಚ್ಚಿನ ರಾಜಕಾರಣಿಗಳು, ಉನ್ನತಾಧಿಕಾರಿಗಳು ಈ ಪ್ರದೇಶದಲ್ಲಿಯೇ ಹೆಚ್ಚಾಗಿ ವಾಸವಿದ್ದಾರೆ. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಬಳಿಕ, ಮುಖ್ಯಮಂತ್ರಿಗಳಿಗೆ ಶಾಶ್ವತ ಸೌಲಭ್ಯ ಕಲ್ಪಿಸಿದ್ದ ಕಾನೂನನ್ನೂ ರದ್ದುಮಾಡಲಾಗಿದೆ.