ಎರಡು ಗಂಟೆ ತಡವಾಗಿ ಬಂದ ಆಂಬ್ಯುಲೆನ್ಸ್, ಹೊಟ್ಟೆ ನೋವಿನಿಂದ ಬಳಲುತ್ತಿದ್ದ 23 ವರ್ಷದ ಗರ್ಭಿಣಿ ಸಾವು

ವಿಲ್ಲುಪುರಂ ಜಿಲ್ಲೆಯ ತಿರುವೆನ್ನೈನಲ್ಲೂರು ತಾಲೂಕಿನ ಬಳಿ 108 ಆಂಬ್ಯುಲೆನ್ಸ್ ಬರುವುದು ವಿಳಂಬವಾದ ಕಾರಣ 23 ವರ್ಷದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ವಿಲ್ಲುಪುರಂ: ವಿಲ್ಲುಪುರಂ ಜಿಲ್ಲೆಯ ತಿರುವೆನ್ನೈನಲ್ಲೂರು ತಾಲೂಕಿನ ಬಳಿ 108 ಆಂಬ್ಯುಲೆನ್ಸ್ ಬರುವುದು ವಿಳಂಬವಾದ ಕಾರಣ 23 ವರ್ಷದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ. 

ಮೃತರನ್ನು ಟಿ ಸಂಧ್ಯಾ ಎಂದು ಗುರುತಿಸಲಾಗಿದ್ದು, ಮಂಡಗಮೇಡು ಗ್ರಾಮದ ನಿವಾಸಿ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಭಾನುವಾರ ರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ಆಕೆಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ತಕ್ಷಣವೇ ಆಕೆಯನ್ನು ಮುಂಡಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲು ಶಿಫಾರಸು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಧ್ಯಾ ಅವರ ಕುಟುಂಬವು 12.30ಕ್ಕೆ 108 ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್‌ ಒದಗಿಸುವಂತೆ ಹೇಳಿದೆ. ಆದರೆ, ಆಂಬ್ಯುಲೆನ್ಸ್ ಎರಡು ಗಂಟೆಗಳ ನಂತರ 2.30ಕ್ಕೆ ಬಂದಿದೆ ಮತ್ತು ಆ ಹೊತ್ತಿಗೆ ಸಂಧ್ಯಾ ಅವರ ಸ್ಥಿತಿ ಹದಗೆಟ್ಟಿತ್ತು. ಗ್ರಾಮದಿಂದ 15 ಕಿಲೋಮೀಟರ್ ದೂರದಲ್ಲಿರುವ ಮುಂಡಿಯಂಬಕ್ಕಂ ಆಸ್ಪತ್ರೆಗೆ ಕರೆದೊಯ್ದರೂ, ಆಕೆ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸಂಧ್ಯಾ ಅವರ ಕುಟುಂಬವು ಆಂಬ್ಯುಲೆನ್ಸ್ ಸೇವೆಯ ಕೊರತೆಗಾಗಿ ತಿರುವೆನ್ನೈನಲ್ಲೂರು ಪೊಲೀಸರಲ್ಲಿ ಪ್ರಕರಣ ದಾಖಲಿಸಿದೆ. 

ಮೃತರ ತಾಯಿ ಇ ಸುಮತಿ (45) ಟಿಎನ್ಐಇ ಜೊತೆಗೆ ಮಾತನಾಡಿ, 'ಇಂತಹ ದುರಂತವು ಬೇರೆ ಯಾವುದೇ ಕುಟುಂಬಕ್ಕೆ ಬಾರದಂತೆ ತುರ್ತು ವೈದ್ಯಕೀಯ ಸೇವೆಗಳಲ್ಲಿ ತಕ್ಷಣದ ಸುಧಾರಣೆಗಳು ಆಗಬೇಕು. ರಾಜ್ಯದ ಕಳಪೆ ವೈದ್ಯಕೀಯ ಸೇವೆಯಿಂದಾಗಿ ನಮ್ಮ ಮಗಳ ಜೀವ ಹೋಗಿದೆ' ಎಂದರು. 

ಗ್ರಾಮದಲ್ಲಿ ಇಂತಹ ಘಟನೆ ವರದಿಯಾಗಿರುವುದು ಇದೇ ಮೊದಲು ಎಂಬುದು ಗಮನಿಸಬೇಕಾದ ಸಂಗತಿ. 

ಆಂಬ್ಯುಲೆನ್ಸ್ ಆಗಮನದಲ್ಲಿ ವಿಳಂಬಕ್ಕೆ ಕಾರಣವೇನು ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಯಾವುದೇ ಪ್ರಯತ್ನಗಳು ನಡೆದಿವೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com