ಭಾರತದಲ್ಲಿ ಅವಿಶ್ವಾಸ ನಿರ್ಣಯದ ಇತಿಹಾಸ: ಮೂರು ಬಾರಿ ಸರ್ಕಾರ ಪತನ; ಬಾಕಿಯೆಲ್ಲಾ ಸೋಲು!

ಮಣಿಪುರ ಗಲಭೆ ವಿಚಾರವಾಗಿ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದು, 28ನೇ ಸದನದಲ್ಲಿ ಅಂಗೀಕಾರಗೊಂಡಿರುವ 28ನೇ ನಿರ್ಣಯ ಇದಾಗಿದೆ.
ಲೋಕಸಭೆ (ಸಂಗ್ರಹ ಚಿತ್ರ)
ಲೋಕಸಭೆ (ಸಂಗ್ರಹ ಚಿತ್ರ)

ನವದೆಹಲಿ: ಮಣಿಪುರ ಗಲಭೆ ವಿಚಾರವಾಗಿ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದು, 28ನೇ ಸದನದಲ್ಲಿ ಅಂಗೀಕಾರಗೊಂಡಿರುವ 28ನೇ ನಿರ್ಣಯ ಇದಾಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಇದನ್ನು ಮತಕ್ಕೆ ಹಾಕುವ ನಿರ್ಧಾರವನ್ನು ಲೋಕಸಭೆ ಸ್ಪೀಕರ್ ಇನ್ನೂ ತೆಗೆದುಕೊಂಡಿಲ್ಲ. ದೇಶದ ಇತಿಹಾಸದಲ್ಲಿ ಈವರೆಗೆ ಇಂತಹ 27 ನಿರ್ಣಯಗಳಿಗೆ ಸೋಲಾಗಿದೆ. ಆದರೆ ಮೂರು ಮಾತ್ರ ಬಾರಿ ಸರ್ಕಾರಗಳು ಉರುಳಿವೆ.

ಅವಿಶ್ವಾಸ ನಿರ್ಣಯಕ್ಕೆ ಭಾರತದ ಸಂಸತ್ತಿನಲ್ಲಿ ದೊಡ್ಡ ಇತಿಹಾಸವೇ ಇದ್ದು ದೇಶದ ಇತಿಹಾಸದಲ್ಲಿ ಈವರೆಗೆ ಇಂತಹ 27 ನಿರ್ಣಯಗಳಿಗೆ ಸೋಲಾಗಿದೆ. ಆದರೆ ಮೂರು ಮಾತ್ರ ಬಾರಿ ಸರ್ಕಾರಗಳು ಉರುಳಿವೆ. ದೇಶದ ಇತಿಹಾಸದಲ್ಲಿ ಲೋಕಸಭೆಯಲ್ಲಿ ಈವರೆಗೂ 30 ಬಾರಿ ಅವಿಶ್ವಾಸ ಗೊತ್ತುವಳಿಗಳನ್ನು ಮಂಡಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸೋಲು ಕಂಡಿವೆ ಅಥವಾ ಅಪೂರ್ಣವಾಗಿ ಉಳಿದಿವೆ. ಆದರೆ ವಿಶ್ವಾಸಮತ ಸಾಬೀತುಪಡಿಸುವ ಪ್ರಕ್ರಿಯೆಗಳಲ್ಲಿ ಇದುವರೆಗೂ ಮೂರು ಬಾರಿ ಮಾತ್ರ ಸರ್ಕಾರಗಳು ಉರುಳಿವೆ.

ಏನಿದು ಅವಿಶ್ವಾಸ ನಿರ್ಣಯ?
ಪ್ರಸ್ತುತ ಲೋಕಸಭೆಯಲ್ಲಿ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಎರಡು ಪಕ್ಷಗಳು ಈ ನಿರ್ಣಯ ಸಲ್ಲಿಸಿವೆ. ಇಷ್ಟಕ್ಕೂ ಏನಿದು ಅವಿಶ್ವಾಸ ನಿರ್ಣಯ..?  ಅವಿಶ್ವಾಸ ನಿರ್ಣಯ ಎನ್ನುವುದು, ಲೋಕಸಭೆಯ ಕಾರ್ಯ ವಿಧಾನ ನಿಯಮ ಮತ್ತು ಚಟುವಟಿಕೆಗಳ ನಡವಳಿಕೆಯ 198ನೇ ನಿಯಮದಡಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಲು ಇರುವ ಔಪಚಾರಿಕ ಪ್ರಸ್ತಾವನೆಯಾಗಿದೆ. 

ಅವಿಶ್ವಾಸ ನಿರ್ಣಯದ ಕುರಿತು
ಪಿಆರ್‌ಎಸ್ ಲೆಜಿಸ್ಲೇಟಿವ್ ರೀಸರ್ಚ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಅವಿಶ್ವಾಸ ನಿರ್ಣಯಗಳಲ್ಲಿ ಮಂಡಿಸಿರುವುದು ಇಂದಿರಾ ಗಾಂಧಿ ನೇತೃತ್ವದ ಸರ್ಕಾರಗಳ ವಿರುದ್ಧ. ಇಂದಿರಾ ಗಾಂಧಿ ಅವರು 15 ಬಾರಿ ಈ ಅಗ್ನಿಪರೀಕ್ಷೆ ಎದುರಿಸಿದ್ದಾರೆ. 1979ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಅವರು ರಾಜೀನಾಮೆ ನೀಡಿದ್ದರು. ಆದರೆ ಅದರ ಕುರಿತಾದ ಚರ್ಚೆ ಅಪೂರ್ಣವಾಗಿತ್ತು ಮತ್ತು ನಿರ್ಣಯದ ಪರ ಮತ ಚಲಾವಣೆಯೂ ನಡೆದಿರಲಿಲ್ಲ. ಈವರೆಗೂ ಅವಿಶ್ವಾಸ ನಿರ್ಣಯವು ಒಟ್ಟು ಮೂರು ಸರ್ಕಾರಗಳನ್ನು ಪತನಗೊಳಿಸಿದೆ. ಇದೆಲ್ಲವೂ 90ರ ದಶಕದಲ್ಲಿ ನಡೆದಿರುವುದು ಎನ್ನುವುದು ವಿಶೇಷ. 1990ರಲ್ಲಿ ವಿಪಿ ಸಿಂಗ್ ಸರ್ಕಾರ, 1997ರಲ್ಲಿ ಎಚ್‌ಡಿ ದೇವಗೌಡ ಸರ್ಕಾರ ಮತ್ತು 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ.

1990ರ ನವೆಂಬರ್ 7ರಂದು ವಿಪಿ ಸಿಂಗ್ ಅವರು ಸಚಿವ ಸಂಪುಟದಲ್ಲಿ ವಿಶ್ವಾಸ ನಿರ್ಣಯ ಮಂಡಿಸಿದ್ದರು. ರಾಮ ಮಂದಿರ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಬಿಜೆಪಿ, ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದರಿಂದ ಅವರ ನಿರ್ಣಯಕ್ಕೆ ಸೋಲಾಗಿತ್ತು. 346 ಮತಗಳ ಎದುರು ವಿಪಿ ಸಿಂಗ್ ಪರ 142 ಮತಗಳು ಚಲಾವಣೆಯಾಗಿದ್ದವು. ಅದೇ ರೀತಿ, 1997ರ ಏಪ್ರಿಲ್ 11ರಂದು ದೇವೇಗೌಡ ಅವರು ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದರು. 10 ತಿಂಗಳ ಸಮ್ಮಿಶ್ರ ಸರ್ಕಾರಕ್ಕೆ 158 ಸಂಸದರು ಬೆಂಬಲ ಸೂಚಿಸಿದ್ದರೆ, 292 ಸಂಸದರು ವಿರುದ್ಧ ಮತ ಚಲಾಯಿಸಿದ್ದರು. 1998ರಲ್ಲಿ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದರು. ಏಪ್ರಿಲ್ 17ರಂದು ಜಯಲಲಿತಾ ಅವರ ಎಐಎಡಿಎಂಕೆ ಬೆಂಬಲ ಹಿಂದಕ್ಕೆ ಪಡೆದ ಪರಿಣಾಮ ಕೇವಲ 1 ಮತದಿಂದ ಅಟಲ್ ಸರ್ಕಾರ ಪತನಗೊಂಡಿತ್ತು.

ಅವಿಶ್ವಾಸ ನಿರ್ಣಯದ ಇತಿಹಾಸ
1. 1963ರ ಆಗಸ್ಟ್- ಚೀನಾ ಎದುರು ಯುದ್ಧದಲ್ಲಿ ಸೋಲು ಕಂಡ ಕೂಡಲೇ ಜವಹರಲಾಲ್ ನೆಹರೂ ಸರ್ಕಾರದ ವಿರುದ್ಧ ದಾಖಲಾದ ದೇಶದ ಮೊದಲ ಅವಿಶ್ವಾಸ ನಿರ್ಣಯ. ಆಚಾರ್ಯ ಕೃಪಲಾನಿ ಮಂಡಿಸಿದ ನಿರ್ಣಯಕ್ಕೆ 62 ಸಂಸದರು ಬೆಂಬಲಿಸಿದರೆ, 347 ಮಂದಿ ವಿರೋಧಿಸಿದ್ದರು.
2. 1964ರ ಸೆಪ್ಟೆಂಬರ್- ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರದ ವಿರುದ್ಧ ಎನ್‌ಸಿ ಚಟರ್ಜಿ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದರಲ್ಲಿ ನಿರ್ಣಯದ ವಿರುದ್ಧ 307 ಮತ್ತು ಪರ ಕೇವಲ 50 ಮತಗಳು ಬಿದ್ದಿದ್ದವು. ಇದರಿಂದ ನಿರ್ಣಯಕ್ಕೆ ಸೋಲಾಗಿತ್ತು.
3. 1965ರ ಮಾರ್ಚ್- ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರದ ವಿರುದ್ಧ ಸಂಸದ ಎಸ್‌ಎನ್ ದ್ವಿವೇದಿ ನಿರ್ಣಯ ಮಂಡಿಸಿದ್ದರು. ಇದಕ್ಕೆ 44 ಸಂಸದರು ಮಾತ್ರ ಬೆಂಬಲ ಸೂಚಿಸಿದ್ದರು. 315 ಜನ ವಿರೋಧಿಸಿದ್ದರು.
4. 1965ರ ಆಗಸ್ಟ್- ಆಗಿನ ಸ್ವತಂತ್ರ ಪಾರ್ಟಿ ಸಂಸದ ಎಂಆರ್ ಮಸನಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ 66 ಸಂಸದರು ಬೆಂಬಲ ನೀಡಿದ್ದರೆ, 315 ಮಂದಿ ವಿರೋಧಿಸಿದ್ದರು.
5. 1966ರ ಆಗಸ್ಟ್- ರಾಜ್ಯಸಭೆ ಸಂಸದರಾಗಿದ್ದ ಇಂದಿರಾ ಗಾಂಧಿ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಸಿಪಿಐ ಸಂಸದ ಹೀರೇಂದ್ರನಾಥ್ ಮುಖರ್ಜಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಅದಕ್ಕೆ 61 ಸಂಸದರ ಬೆಂಬಲ ಸಿಕ್ಕರೆ, 270 ಮಂದಿ ವಿರುದ್ಧ ಮತ ಚಲಾಯಿಸಿ ಸೋಲುಣುಸಿದರು.
6. 1996ರ ನವೆಂಬರ್- ಒಂದೇ ವರ್ಷದಲ್ಲಿ ಎರಡನೇ ಬಾರಿ ಅವಿಶ್ವಾಸ ನಿರ್ಣಯ ಎದುರಿಸಿದ ಇಂದಿರಾ ಗಾಂಧಿ. ಭಾರತೀಯ ಜನ ಸಂಘದ ಯುಎಂ ತ್ರಿವೇದಿ ಮಂಡಿಸಿದ ನಿರ್ಣಯವನ್ನು 36 ಮಂದಿ ಬೆಂಬಲಿಸಿದರೆ, 235 ಸಂಸದರು ವಿರೋಧಿಸಿದ್ದರು.
7. 1976ರ ಮಾರ್ಚ್- ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಅಟಲ್ ಬಿಹಾರಿ ವಾಜಪೇಯಿ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. 162 ಸಂಸದರು ಸರ್ಕಾರ ವಿರುದ್ಧ ಮತ ಚಲಾಯಿಸಿದರೆ, 257 ಸಂಸದರು ಇಂದಿರಾಗೆ ಬೆಂಬಲ ನೀಡಿದ್ದರು. ಈವರೆಗೂ ಸರ್ಕಾರವೊಂದರ ವಿರುದ್ಧ, ವಿಶ್ವಾಸ ನಿರ್ಣಯದ ಪರ ದಾಖಲಾದ ಅತ್ಯಧಿಕ ಮತ ಇದಾಗಿದೆ.
8. 1967ರ ನವೆಂಬರ್- ಇಂದಿರಾ ಸರ್ಕಾರದ ವಿರುದ್ಧ ಮಧು ಲಿಮಾಯೆ ಅವಿಶ್ವಾಸ ನಿರ್ಣಯ ಸಲ್ಲಿಸಿದ್ದರು. ಇದಕ್ಕೆ 88 ಸಂಸದರ ಬೆಂಬಲ ಸಿಕ್ಕಿತ್ತು. 215 ಸಂಸದರು ನಿರ್ಣಯದ ವಿರುದ್ಧ ಮತ ಚಲಾಯಿಸಿದರು.
9. 1968ರ ಫೆಬ್ರವರಿ- ಬಾಲರಾಜ್ ಮಧೋಕ್ ಅವರು ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಇಂದಿರಾ ಗಾಂಧಿ ಪರ 215 ಸಂಸದರು ಮತ ಹಾಕಿದರೆ, 75 ಮಂದಿ ನಿರ್ಣಯದ ಪರವಾಗಿದ್ದರು.
10. 1968ರ ನವೆಂಬರ್- ಜನಸಂಘದ ಕನ್ವರ್ ಲಾಲ್ ಗುಪ್ತಾ ಅವರು ಮಂಡಿಸಿದ ನಿರ್ಣಯಕ್ಕೆ 90 ಸಂಸದರ ಬೆಂಬಲ ಸಿಕ್ಕಿತ್ತು. ಆದರೆ ಇಂದಿರಾ ಗಾಂಧಿ ಪರ 222 ಮಂದಿ ಮತ ಚಲಾಯಿಸಿದ್ದರು.
11. 1969ರ ಫೆಬ್ರವರಿ- ಸಿಪಿಎಂ ನಾಯಕ ಪಿ ರಾಮಮೂರ್ತಿ ಅವರು ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಮಂಡಿಸಿದ ನಿರ್ಣಯಕ್ಕೆ 86 ಸಂಸದರ ಬಲ ಸಿಕ್ಕರೆ, 215 ಸಂಸದರು ಸೇರಿ ಸೋಲು ಕಾಣಿಸಿದ್ದರು.
12. 1970ರ ಜುಲೈ- ಮಧು ಲಿಮಾಯೆ ಅವರು ಎರಡನೇ ಬಾರಿ ಇಂದಿರಾ ಗಾಂಧಿ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯವಿದು. ಈ ನಿರ್ಣಯಕ್ಕೆ 137 ಸಂಸದರ ಬೆಂಬಲವಿದ್ದರೆ, 243 ಸಂಸದರು ವಿರುದ್ಧವಾಗಿದ್ದರು.
13. 1973ರ ನವೆಂಬರ್- ಸಿಪಿಐ-ಎಂ ಸಂಸದ ಜ್ಯೋತಿರ್ಮಯಿ ಬಸು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಕೇವಲ 54 ಸಂಸದರ ಬೆಂಬಲ ಸಿಕ್ಕಿತ್ತು. ಇನ್ನು 251 ಸಂಸದರು ಇಂದಿರಾ ಗಾಂಧಿ ಅವರಿಗೆ ಬೆಂಬಲವಾಗಿ ನಿಂತಿದ್ದರು.
14. 1974ರ ಮೇ- ಪಟ್ಟುಬಿಡದ ಜ್ಯೋತಿರ್ಮಯಿ ಮತ್ತೊಮ್ಮೆ ನಿರ್ಣಯ ಮಂಡಿಸಿದರು. ಇದಕ್ಕೆ ಧ್ವನಿ ಮತದಲ್ಲಿ ಸೋಲಾಯಿತು.
15. 1974ರ ಜುಲೈ- ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಬಸು ಅವರು ಮಂಡಿಸಿದ ಮೂರನೇ ನಿರ್ಣದ ಪರ 63 ಸಂಸದರು ಮತ ಚಲಾಯಿಸಿದರೆ, 297 ಮಂದಿ ವಿರೋಧಿಸಿದ್ದರು.
16. 1975ರ ಮೇ- ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗುವ ಒಂದು ತಿಂಗಳಿಗೂ ಮುಂಚೆ ಇಂದಿರಾ ಸರ್ಕಾರದ ವಿರುದ್ಧ ಜ್ಯೋತಿರ್ಮಯಿ ನಾಲ್ಕನೇ ಬಾರಿ ನಿರ್ಣಯ ಮಂಡಿಸಿದ್ದರು. ಇದಕ್ಕೆ ಕೂಡ ಧ್ವನಿ ಮತದಲ್ಲಿ ಸೋಲು ಉಂಟಾಗಿತ್ತು.
17. 1978ರ ಮೇ- ಮೊರಾರ್ಜಿ ದೇಸಾಯಿ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ಸಿಎಂ ಸ್ಟೀಫನ್ ಅವರು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಧ್ವನಿ ಮತ ಪ್ರಕ್ರಿಯೆಯಲ್ಲಿ ಸೋಲು ಎದುರಾಗಿತ್ತು.
18. 1979ರ ಜುಲೈ- ಮೊರಾರ್ಜಿ ಸರ್ಕಾರದ ವಿರುದ್ಧ ವೈಬಿ ಚವಾಣ್ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದರು. ಆದರೆ ಈ ಕುರಿತಾದ ಚರ್ಚೆ ಪೂರ್ಣಗೊಳ್ಳುವ ಮುನ್ನವೇ ಮೊರಾರ್ಜಿ ಅವರು ರಾಜೀನಾಮೆ ನೀಡಿ, ರಾಜಕೀಯದಿಂದ ನಿವೃತ್ತರಾದರು. ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯದೆಯೂ ಸರ್ಕಾರ ಪತನಗೊಂಡ ಏಕೈಕ ನಿದರ್ಶನವಿದು.
19. 1981ರ ಮೇ- ಜಾರ್ಜ್ ಫರ್ನಾಂಡಿಸ್ ಅವರು ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ವಿರುದ್ಧ 278 ಮತ್ತು ಪರ 92 ಸಂಸದರು ಮತ ಚಲಾಯಿಸಿದ್ದರು.
20. 1981ರ ಸೆಪ್ಟೆಂಬರ್- ಇಂದಿರಾ ಸರ್ಕಾರದ ವಿರುದ್ಧ ಸಿಪಿಐಎಂ ಸಂಸದ ಸಮರ್ ಮುಖರ್ಜಿ ಮಂಡಿಸಿದ್ದ ನಿರ್ಣಯಕ್ಕೆ 86 ಸಂಸದರ ಬೆಂಬಲ ಸಿಕ್ಕರೆ, 297 ಮಂದಿ ವಿರುದ್ಧ ಮತ ಚಲಾಯಿಸಿದ್ದರು.
21. 1982ರ ಆಗಸ್ಟ್- ತುರ್ತು ಪರಿಸ್ಥಿತಿ ಜಾರಿಯಾದಾದ ಕಾಂಗ್ರೆಸ್ ತೊರೆದಿದ್ದ ಎಚ್‌ಎನ್ ಬಹುಗುಣ ಅವರು ಇಂದಿರಾ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿದ್ದರು. ಇದಕ್ಕೆ 112 ಸಂಸದರ ಬೆಂಬಲ ಸಿಕ್ಕರೆ, 333 ಮಂದಿ ವಿರೋಧಿಸಿದ್ದರು.
22. 1987ರ ಡಿಸೆಂಬರ್- ರಾಜೀವ್ ಗಾಂಧಿ ಸರ್ಕಾರದ ವಿರುದ್ಧ ಸಿ ಮಾಧವ ರೆಡ್ಡಿ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಧ್ವನಿ ಮತದ ಸೋಲಾಗಿತ್ತು.
23. 1992ರ ಜುಲೈ- ಬಿಜೆಪಿಯ ಜಸ್ವಂತ್ ಸಿಂಗ್ ಅವರು ಪಿವಿ ನರಸಿಂಹರಾವ್ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ತೀವ್ರ ಪೈಪೋಟಿಗೆ ಸಾಕ್ಷಿಯಾದ ನಿರ್ಣಯವಿದು. ಇದರಲ್ಲಿ 225 ಸಂಸದರು ನಿರ್ಣಯದ ಪರವಿದ್ದರೆ, 271 ಮಂದಿ ಅದಕ್ಕೆ ವಿರೋಧಿಸಿದ್ದರಿಂದ ಸೋಲುಂಟಾಯಿತು.
24. 1992ರ ಡಿಸೆಂಬರ್- ಅಟಲ್ ಬಿಹಾರಿ ವಾಜಪೇಯಿ ಅವರು ಆ ವರ್ಷದ ಎರಡನೇ ಅವಿಶ್ವಾಸ ಗೊತ್ತುವಳಿ ಮಂಡಿಸಿದರು. 111 ಸಂಸದರ ಬೆಂಬಲ ಹಾಗೂ 336 ಸಂಸದರ ವಿರೋಧದೊಂದಿಗೆ ತೀವ್ರ ಚರ್ಚೆ ಬಳಿಕ ಅದಕ್ಕೆ ಸೋಲಾಗಿತ್ತು.
25. 1993ರ ಜುಲೈ- ಅಜಯ್ ಮುಖ್ಯೋಪಾಧ್ಯಾಯ ಅವರು ಮತ್ತೆ ನರಸಿಂಹರಾವ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದಕ್ಕೆ 251 ಸಂಸದರ ಬೆಂಬಲ ಸಿಕ್ಕರೂ, 265 ಸಂಸದರು ವಿರುದ್ಧ ಮತ ಚಲಾಯಿಸಿದ್ದರಿಂದ ಸ್ವಲ್ಪವೇ ಅಂತರದಲ್ಲಿ ರಾವ್ ಸರ್ಕಾರ ಬಚಾವಾಯಿತು.
26. 2003ರ ಆಗಸ್ಟ್- ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕಿ ಸೋನಿಯಾ ಗಾಂಧಿ ಅವರು ಮಂಡಿಸಿದ ನಿರ್ಣಯವನ್ನು 314 ಸಂಸದರ ವಿರೋಧಿಸಿದರೆ, 189 ಸಂಸದರು ಬೆಂಬಲಿಸಿದ್ದರು.
27. 2018ರ ಜುಲೈ- ತೆಲುಗು ದೇಶಂ ಪಕ್ಷದ ಶ್ರೀನಿವಾಸ್ ಕೇಸಿನೇನಿ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಲ್ಲಿಸಿದ್ದ ನಿರ್ಣಯದ ಕುರಿತು 11 ಗಂಟೆ ಚರ್ಚೆ ನಡೆದಿತ್ತು. ನಿರ್ಣಯದ ಪರ 135 ಹಾಗೂ ಅದರ ವಿರುದ್ಧ 330 ಸಂಸದರು ಮತ ಚಲಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com