ಶರದ್ ಪವಾರ್ ಜೊತೆ ಮಾತನಾಡಿದ್ದೇನೆ, ಮಂಗಳವಾರ ಬೆಳಗ್ಗೆ ಪ್ರತಿಪಕ್ಷಗಳ ಸಭೆಗೆ ಬರುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಗೈರಾಗಲಿದ್ದಾರೆ ಎನ್ನುವ ವರದಿಗಳ ನಡುವೆಯೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಸ್ಪಷ್ಟನೆ ನೀಡಿದ್ದಾರೆ. 
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಗೈರಾಗಲಿದ್ದಾರೆ ಎನ್ನುವ ವರದಿಗಳ ನಡುವೆಯೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಸ್ಪಷ್ಟನೆ ನೀಡಿದ್ದಾರೆ. 

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಜುಲೈ 18 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ ಎಂದಿದ್ದಾರೆ.

ಸೋಮವಾರದ ವಿಪಕ್ಷಗಳ ಸಭೆಗೆ ಪವಾರ್ ಗೈರಾಗಿ, ಮಂಗಳವಾರ ಪಾಲ್ಗೊಳ್ಳಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ವಿರೋಧ ಪಕ್ಷಗಳ ಅಧಿಕೃತ ಸಭೆ ಮಂಗಳವಾರ ನಡೆಯಲಿದೆ. ಆದರೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಂದು ಕೇವಲ ಔತಣಕೂಟವನ್ನು ಆಯೋಜಿಸುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗಾರರೊಂದಿಗಿನ ಸಂವಾದದ ವೇಳೆ ಪವಾರ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನಾನು ಹಿಂದಿನ ದಿನ ಪವಾರ್ ಜೊತೆ ಮಾತನಾಡಿದ್ದೇನೆ. ಇಂದು ಅಲ್ಲಿ (ಮಹಾರಾಷ್ಟ್ರ) ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದೆ ಮತ್ತು ಅವರು ಇಂದು ಅಲ್ಲಿರಲು (ಮುಂಬೈ) ಬಯಸುತ್ತಾರೆ. ಆದರೆ, ನಾಳೆ ಸಭೆಗೆ ಹಾಜರಾಗಲಿದ್ದಾರೆ. ಅವರು ಬರುವುದು ಮುಖ್ಯವಾಗಿದ್ದು, ಅವರನ್ನು ಕರೆದಿದ್ದೇನೆ. ಹೀಗಾಗಿ, ಅವರು ಜುಲೈ 18 ರಂದು ಬೆಳಿಗ್ಗೆ ಬರುವುದಾಗಿ ಹೇಳಿದ್ದಾರೆ' ಎಂದು ಹೇಳಿದರು.

'ಯಾವುದೇ ತೊಂದರೆ ಇಲ್ಲ, ಎಲ್ಲರೂ ಬರುತ್ತಿದ್ದಾರೆ. ಮಮತಾ ಜಿ ಬರುತ್ತಿದ್ದಾರೆ, ಕೇಜ್ರಿವಾಲ್ ಜಿ ಬರುತ್ತಿದ್ದಾರೆ. ನಿತೀಶ್ ಜಿ, ತೇಜಸ್ವಿ ಜಿ, ಸ್ಟಾಲಿನ್ ಜಿ ಬರುತ್ತಿದ್ದಾರೆ. ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದವರಿಗಿಂತ ಹೆಚ್ಚು ಜನರು ನಮ್ಮೊಂದಿಗೆ ಸೇರುತ್ತಿದ್ದಾರೆ' ಎಂದು ತಿಳಿಸಿದರು.

ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಆಢಳಿತಾರೂಢ ಬಿಜೆಪಿಯನ್ನು ಸೋಲಿಸಲೇ ಬೇಕು ಎಂದು ಪಣತೊಟ್ಟಿರುವ ವಿರೋಧ ಪಕ್ಷಗಳು ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ಮುಂದಾಗಿವೆ. ಸಭೆಯಲ್ಲಿ 26 ವಿಪಕ್ಷಗಳ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ವಿವಿಧ ಪಕ್ಷಗಳ ರಾಷ್ಟ್ರ ಮಟ್ಟದ ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಭೆಯಲ್ಲಿ ಬಿಜೆಪಿಯನ್ನು ಎದುರಿಸಲು ಜಂಟಿ ತಂತ್ರಗಳನ್ನು ರೂಪಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com