ಶಿಮ್ಲಾ: ತಾವು ಬೆಳೆದ ಆ್ಯಪಲ್ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಹಿಮಾಚಲ ಪ್ರದೇಶದ ರೈತರು ಬೆಳೆಯನ್ನು ನದಿಗೆ ಸುರಿದು ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಮಾರುಕಟ್ಟೆಗೆ ಹೋಗಲು ಸಾಧ್ಯವಾಗದೇ ಆಕ್ರೋಶಗೊಂಡ ರೈತರು ಬುಟ್ಟಿ ಬುಟ್ಟಿ ಸೇಬುಗಳನ್ನು ರಸ್ತೆ ಬದಿಯ ಝರಿಗೆ ಎಸೆದಿರುವ ಘಟನೆ ಇಲ್ಲಿನ ಹಿಮಾಚಲ ಪ್ರದೇಶದ ರೋಹ್ರು ಪಟ್ಟಣದಲ್ಲಿ ನಡೆದಿದೆ. ಸೇಬು ಬೆಳೆಗಾರರಾದ ಮೂವರು ರೈತರು ಸ್ಥಳೀಯ ತಹಶೀಲ್ದಾರ್ಗೆ ದೂರು ನೀಡಿ, ಭೂಕುಸಿತದಿಂದ ರಸ್ತೆಗಳು ಮುಚ್ಚಿ ಹೋಗಿದ್ದು, ಮಾರುಕಟ್ಟೆಗೆ ಹೋಗಿ ಸೇಬುಗಳನ್ನು ಮಾರಲು ಅಸಾಧ್ಯವಾಗಿದೆ. ಹೀಗಾಗಿ ಬೆಳೆಯನ್ನು ನೀರಿಗೆಸೆದಿದ್ದೇವೆ ಎಂದು ದುಃಖ ತೋಡಿಕೊಂಡಿದ್ದಾರೆ.
ಬೆಳೆಗಾರರು ಸೇಬುಗಳನ್ನು ಎಸೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ರೋಹ್ರು ಪಟ್ಟಣದ ರಸ್ತೆಬದಿ ಪಿಕಪ್ ವಾಹನ ನಿಲ್ಲಿಸಿ ಎಸೆಯುತ್ತಿರುವುದನ್ನು ಕಾಣಬಹುದು. ರೈತರು ಒಂದೊಂದೇ ಆ್ಯಪಲ್ ಟ್ರೇಗಳನ್ನು ತಂದು ನೂರಾರು ಸೇಬುಗಳನ್ನು ನೀರಿಗೆ ಬಿಡುತ್ತಿರುವುದು ದೃಶ್ಯದಲ್ಲಿದೆ.
ಭಾರಿ ಮಳೆಯಿಂದ ರಸ್ತೆ ಬಂದ್
ಇನ್ನು ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು ಗ್ರಾಮವನ್ನು ಮುಖ್ಯರಸ್ತೆಗೆ ಸಂಪರ್ಕಿಸುವ ಬ್ಲಸಾನ್-ಚಾನ್ರಿ-ಪದ್ಸಾರಿ ರಸ್ತೆಯನ್ನು ಜುಲೈ 9ರಿಂದ ಮುಚ್ಚಲಾಗಿದೆ. ಇದರಿಂದಾಗಿ ಬೆಳೆಗಾರರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲಾಗುತ್ತಿಲ್ಲ. ಸುಮಾರು 68 ಕ್ರೇಟ್ ಸೇಬುಗಳನ್ನು ಮೂವರು ರೈತರು ರಸ್ತೆ ಬದಿಯ ಝರಿಯಲ್ಲಿ ಬಿಟ್ಟಿದ್ದಾರೆ.
ಹಿಮಾಚಲ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಘಟನೆಗೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಕ್ತಾರ ಚೇತನ್ ಬ್ರಗ್ತಾ ಪ್ರತಿಕ್ರಿಯಿಸಿ, "ರಾಜ್ಯದ ಹಲವಾರು ರಸ್ತೆಗಳು ಮುಚ್ಚಲ್ಪಟ್ಟಿವೆ. ರೈತರು ಆತಂಕಕ್ಕೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಸೇಬು ಸಾಗಾಟವೇ ಪ್ರಮುಖ ಸಮಸ್ಯೆಯಾಗಲಿದೆ. ಪ್ರತಿ ವರ್ಷ ಜುಲೈ 15ರೊಳಗೆ ಸರ್ಕಾರಿ ಸಂಸ್ಥೆಗಳಿಂದ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಸೌಲಭ್ಯವಿಲ್ಲ. ಸಂಗ್ರಹಣಾ ಕೇಂದ್ರವೂ ಇಲ್ಲದೆ, ರಸ್ತೆಗಳನ್ನು ಮುಚ್ಚಿರುವುದು ರಾಜ್ಯದ ರೈತರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ" ಎಂದು ಹೇಳಿದ್ದಾರೆ.
ಬಿಜೆಪಿ ಮಾಹಿತಿ ಹಾಗು ತಂತ್ರಜ್ಞಾನದ ಉಸ್ತುವಾರಿ ಅಮಿತ್ ಮಾಳವೀಯ, ರಾಜ್ಯ ಸರ್ಕಾರದ ವಿರುದ್ಧ ಟೀಕಾ ಸಮರ ನಡೆಸಿದ್ದಾರೆ. ಶಿಮ್ಲಾದ ಸೇಬು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನೀರಿನಲ್ಲಿ ಹರಿಸುವಂತಾಗಿದೆ. ಹಿಮಾಚಲದ ಕಾಂಗ್ರೆಸ್ ಸರ್ಕಾರವು ರೈತರಿಗೆ ಸಮಯಕ್ಕೆ ಸರಿಯಾಗಿ ಹಣ್ಣುಗಳನ್ನು ಮಾರುಕಟ್ಟೆಗೆ ತಲುಪಿಸಲು ಸಹಾಯ ಮಾಡುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಚಿತ್ತೂರು: ಟೊಮೆಟೊ ಮಾರಾಟದಿಂದ ಕೋಟ್ಯಾಧಿಪತಿಯಾದ ರೈತ!
ವಿಡಿಯೋ ವೈರಲ್ ಬೆನ್ನಲ್ಲೇ ಮುಚ್ಚಿದ್ದ ರಸ್ತೆ ಸಂಚಾರಕ್ಕೆ ಮುಕ್ತ
ಶನಿವಾರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಮುಚ್ಚಲಾಗಿದ್ದ ರಸ್ತೆಯನ್ನು ಭಾನುವಾರ ತೆರೆಯಲಾಗಿದೆ. ಹಿಮಾಚಲ ಪ್ರದೇಶದಲ್ಲಿ 400ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ. ಅವುಗಳಲ್ಲಿ ಸುಮಾರು 240 ರಸ್ತೆಗಳು ಶಿಮ್ಲಾ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳನ್ನು ಒಳಗೊಂಡಿರುವ ವಲಯಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement