2 ಲಕ್ಷ ರೂ. ಸಾಲ ತೀರಿಸದ ಪೋಷಕರು; ಅಪ್ರಾಪ್ತ ಬಾಲಕಿಯನ್ನು ಮದುವೆಯಾದ 40 ವರ್ಷದ ವ್ಯಕ್ತಿ

ಬಾಲಕಿಯ ತಾಯಿ 2 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಎರಡನೇ ಹೆಂಡತಿಯಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಪಾಟ್ನಾ: ಬಾಲಕಿಯ ತಾಯಿ 2 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಎರಡನೇ ಹೆಂಡತಿಯಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆರೋಪಿ ಮಹೇಂದ್ರ ಪಾಂಡೆ ಸಿವಾನ್ ಜಿಲ್ಲೆಯ ಮೈರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ನಿವಾಸಿಯಾಗಿದ್ದು, ಆತನ ವಿರುದ್ಧ ಬಾಲ್ಯ ವಿವಾಹ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012ರ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ಪೋಷಕರು ಪಾಂಡೆಯಿಂದ ಸಾಲವಾಗಿ 2 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಅದನ್ನು ತೀರಿಸಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಕುಟುಂಬವು ಪಾಂಡೆಯ ಒತ್ತಡಕ್ಕೆ ಮಣಿದು ಸಾಲದ ಬದಲಿಗೆ ಹುಡುಗಿಯನ್ನು ಅವನೊಂದಿಗೆ ಕಳುಹಿಸಿತು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಪಾಂಡೆಯನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಅವರು ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂತ್ರಸ್ತೆ ಕಳೆದ ಮೂರು ತಿಂಗಳಿಂದ ಪಾಂಡೆ ಜೊತೆಯಲ್ಲಿದ್ದ ಕಾರಣ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಸಿಆರ್‌ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಮೈರ್ವಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಉಜ್ಜವಲ್ ಕುಮಾರ್ ಹೇಳಿದ್ದಾರೆ.

'ನಾವು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸಿವಾನ್‌ನಲ್ಲಿರುವ ಸದರ್ ಆಸ್ಪತ್ರೆಗೆ ಕಳುಹಿಸಿದ್ದೇವೆ' ಎಂದು ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಫೋನಿನಲ್ಲಿ ತಿಳಿಸಿದರು.

ಬಾಲಕಿಯ ತಾಯಿ ದೂರು ನೀಡಿದ ನಂತರ ಪೊಲೀಸರು ಕ್ರಮಕೈಗೊಂಡಿದ್ದಾರೆ. ದೂರಿನ ಪ್ರಕಾರ, ಬಾಲಕಿಯ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ನೆಪದಲ್ಲಿ 6 ನೇ ತರಗತಿ ವಿದ್ಯಾರ್ಥಿನಿಯನ್ನು ತನ್ನೊಂದಿಗೆ ಕರೆದೊಯ್ದಿದ್ದ ಪಾಂಡೆ, ರಹಸ್ಯವಾಗಿ ಆಕೆಯನ್ನು ವಿವಾಹವಾಗಿದ್ದ ಎನ್ನಲಾಗಿದೆ. 

ಬಾಲ್ಯವಿವಾಹದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸಂತ್ರಸ್ತೆಯ ತಂದೆ ದಿನಗೂಲಿ ಮಾಡಿಕೊಂಡಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಇವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಆರೋಪಿ ಸಂತ್ರಸ್ತೆಯ ಕುಟುಂಬದ ದೂರದ ಸಂಬಂಧಿ ಎನ್ನಲಾಗಿದೆ.

ವಿಚಾರಣೆ ವೇಳೆ ಪಾಂಡೆ ತಪ್ಪೊಪ್ಪಿಕೊಂಡಿದ್ದು, ಅಪರಾಧಕ್ಕಾಗಿ ಕಾನೂನು ಕ್ರಮ ಎದುರಿಸಲು ಸಿದ್ಧನಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com