ಚುನಾವಣೆ ಹೊಸ್ತಿಲಲ್ಲೇ ತೆಲಂಗಾಣ ಬಿಜೆಪಿಗೆ ಮತ್ತೊಂದು ಹೊಡೆತ; ಕಾಂಗ್ರೆಸ್ ಸೇರಿದ ಮಾಜಿ ಸಂಸದ ವಿವೇಕ್!

ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದ್ದು, ಮಾಜಿ ಸಂಸದ ಮತ್ತು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜಿ ವಿವೇಕ್ ವೆಂಕಟಸ್ವಾಮಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ
ಬಿಜೆಪಿ

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದ್ದು, ಮಾಜಿ ಸಂಸದ ಮತ್ತು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜಿ ವಿವೇಕ್ ವೆಂಕಟಸ್ವಾಮಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

'ಭಾರವಾದ ಹೃದಯದಿಂದ ನಾನು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ವಿವೇಕ್ ಅವರು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ನಂತರ ಅವರು ಇಲ್ಲಿನ ಶಂಶಾಬಾದ್‌ನ ನೊವೊಟೆಲ್ ಹೋಟೆಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಪಕ್ಷಕ್ಕೆ ಸೇರ್ಪಡೆಯಾದರು. ಸದ್ಯ ತೆಲಂಗಾಣದಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನು ಪುತ್ರ ವಂಶಿಕೃಷ್ಣ ಅವರ ಜೊತೆಗೂಡಿ ಮಾಜಿ ಸಂಸದರು ಭೇಟಿ ಮಾಡಿದರು.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ ರೇವಂತ್ ರೆಡ್ಡಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ವಿವೇಕ್ ಅವರ ಸೇರ್ಪಡೆಯಿಂದ ಭಾರತ ರಾಷ್ಟ್ರ ಸಮಿತಿಯನ್ನು (ಬಿಆರ್‌ಎಸ್) ಅಧಿಕಾರದಿಂದ ಕಿತ್ತೊಗೆಯುವ ಕಾರ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದೆ ಎಂದು ರೇವಂತ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ನಾನು ಯಾವುದೇ ಹುದ್ದೆ ಅಥವಾ ಟಿಕೆಟ್‌ಗಾಗಿ ಕಾಂಗ್ರೆಸ್‌ಗೆ ಸೇರಿಲ್ಲ. ಕೆಸಿಆರ್ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಕೆಲಸ ಮಾಡಲು ಸೇರಿದ್ದೇನೆ. ಕಳೆದ 10 ವರ್ಷಗಳಿಂದ ಕೆಸಿಆರ್ ಸರ್ಕಾರ ತನ್ನ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದೆಯೇ ಹೊರತು ಜನರ ಒಳಿತಿಗಾಗಿ ಅಲ್ಲ. ಎಲ್ಲರೂ ಒಗ್ಗೂಡಿ ಈ ದುಷ್ಟ ಆಡಳಿತವನ್ನು ಕೊನೆಗಾಣಿಸುವ ಅಗತ್ಯವಿದೆ ಎಂದು ವಿವೇಕ್ ಹೇಳಿದರು.

ವಿವೇಕ್ ಕಾಂಗ್ರೆಸ್ ಪಕ್ಷಕ್ಕೆ ಮರಳಲು ಮುಂದಾಗಿದ್ದಾರೆ ಎಂಬ ಊಹಾಪೋಹಗಳು ಕಳೆದ ಹಲವು ವಾರಗಳಿಂದ ಕೇಳಿ ಬರುತ್ತಿದ್ದವು. ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಪುತ್ರನಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಜಿ. ವೆಂಕಟಸ್ವಾಮಿ ಅವರ ಪುತ್ರ ವಿವೇಕ್, 2019 ರಲ್ಲಿ ಬಿಜೆಪಿ ಸೇರಲು ಟಿಆರ್‌ಎಸ್ (ಈಗ ಬಿಆರ್‌ಎಸ್) ತೊರೆದಿದ್ದರು. ಪೆದ್ದಪಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ತೆಲಂಗಾಣ ಸರ್ಕಾರದ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಆಡಳಿತ ಪಕ್ಷವನ್ನು ತೊರೆದಿದ್ದರು.

ಕೈಗಾರಿಕೋದ್ಯಮಿ ಆಗಿರುವ ವಿವೇಕ್ ಅವರು ಕನಿಷ್ಠ ಆರು ಬಾರಿ ಪಕ್ಷದಿಂದ ಪಕ್ಷಕ್ಕೆ ಜಿಗಿದಿದ್ದಾರೆ. ಅವರು 2009 ರಲ್ಲಿ ಪೆದ್ದಪಲ್ಲಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದರು. ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನದ ಬೇಡಿಕೆಯ ಕುರಿತು ಕಾಂಗ್ರೆಸ್ ಮೇಲೆ ಒತ್ತಡ ಹೇರಲು ಅವರು ನಂತರ ಟಿಆರ್‌ಎಸ್‌ಗೆ ಸೇರಿದರು. 2014ರಲ್ಲಿ ತೆಲಂಗಾಣ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ನಂತರ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿದರು. ಅವರು ಮತ್ತೆ 2016ರಲ್ಲಿ ಟಿಆರ್‌ಎಸ್‌ಗೆ ಹೋದರು ಮತ್ತು 2019ರಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. 

ಮತ್ತೊಬ್ಬ ಹಿರಿಯ ನಾಯಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಕಾಂಗ್ರೆಸ್‌ಗೆ ಮರಳಿದ ಒಂದು ವಾರದೊಳಗೆ ವಿವೇಕ್ ಬಿಜೆಪಿಯಿಂದ ನಿರ್ಗಮಿಸಿದ್ದಾರೆ. ರಾಜ್ ಗೋಪಾಲ್ ರೆಡ್ಡಿ ಕಳೆದ ವರ್ಷ ಬಿಜೆಪಿ ಸೇರಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಆದರೆ, ಉಪಚುನಾವಣೆಯಲ್ಲಿ ಕೇಸರಿ ಪಕ್ಷದ ಟಿಕೆಟ್‌ನಲ್ಲಿ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com