
ಕೋಲ್ಕತ್ತಾ: ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಉಚ್ಛಾಟನೆಯಿಂದ ಮಹುವಾ ಮೋಯಿತ್ರಾಗೆ ಮತ್ತಷ್ಟು ಪ್ರಚಾರ ಸಿಗಲಿದ್ದು, ಆಕೆ ಮತ್ತಷ್ಟು ಜನಪ್ರಿಯಳಾಗುತ್ತಾರೆ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದುಕೊಂಡಿದ್ದಾರೆ ಎಂಬ ಆರೋಪ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಳಿಬಂದಿರುವ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಕೋಲ್ಕತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಟಿಎಂಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಮಹುವಾ ಹೊಂದಿದ್ದಾರೆ ಎಂದು ಹೇಳಿದ್ದಾರೆ.
'ಸಂಸತ್ತಿನಿಂದ ಮಹುವಾ ಅವರನ್ನು ಹೊರಹಾಕುವುದು ಬಿಜೆಪಿಯ ಉದ್ದೇಶವಾಗಿದೆ. ಅದಕ್ಕಾಗಿ ಆ ಪಕ್ಷ ಮಾಡುತ್ತಿರುವ ಪ್ರಯತ್ನವು ಅವರಿಗೆ (ಮಹುವಾಗೆ) ಇನ್ನಷ್ಟು ಜನಪ್ರಿಯತೆ ತಂದುಕೊಡಲಿದೆ. ಮಹುವಾ ಈ ಹಿಂದೆ ಸಂಸತ್ತಿನ ಒಳಗೆ ಏನು ಮಾತನಾಡಿದ್ದಾರೋ.. ಅದನ್ನು ಇನ್ನುಮುಂದೆ ಹೊರಗೂ ಮಾತನಾಡಲಿದ್ದಾರೆ. ಆಕೆಯನ್ನು ಶಿಕ್ಷಿಸುವ ಮೂಲಕ ಬಿಜೆಪಿಯು ಗುರುತರವಾದ ಪ್ರಮಾದವೆಸಗಿದೆ' ಎಂದು ಕಿಡಿಕಾರಿದ್ದಾರೆ.
ಮೊಯಿತ್ರಾ ಅವರ ಉಚ್ಚಾಟನೆ ನಡೆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಪ್ರತಿಪಕ್ಷದ ನಾಯಕರ ವಿರುದ್ದ ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿರುವ ಕೇಂದ್ರೀಯ ಸಂಸ್ಥೆಗಳು 2024ರ ಚುನಾವಣೆಯ ನಂತರ ಬಿಜೆಪಿಯನ್ನು ಹಿಂಬಾಲಿಸುತ್ತವೆ. ಕೇಂದ್ರದಲ್ಲಿ ಈ ಸರ್ಕಾರ ಇನ್ನು 3 ತಿಂಗಳು ಮಾತ್ರ ಇರುತ್ತದೆ ಎಂದು ಹೇಳಿದ್ದಾರೆ.
ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ನೇರವಾಗಿ ಹಾಜರಿರಲಿಲ್ಲ. ಬದಲಾಗಿ ಅವರು ವರ್ಚುವಲ್ ಆಗಿ ಭಾಗಿಯಾಗಿದ್ದರು.
Advertisement