ಐಐಟಿ ಖರಗ್‌ಪುರದಲ್ಲಿ ತೆಲಂಗಾಣದ ವಿದ್ಯಾರ್ಥಿ ಆತ್ಮಹತ್ಯೆ, 3 ವರ್ಷದಲ್ಲಿ 34 ಪ್ರಕರಣ

ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತೆಲಂಗಾಣದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಡಳಿತ ಮಂಡಳಿಯು ಇಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತೆಲಂಗಾಣದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಡಳಿತ ಮಂಡಳಿಯು ಇಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಐಐಟಿ-ಖರಗ್‌ಪುರ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಸುದ್ದಿಯಲ್ಲಿದ್ದು, ಇಂದು ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. "ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ 4ನೇ ವರ್ಷದ ಪದವಿ ವಿದ್ಯಾರ್ಥಿ ಕೆ ಕಿರಣ್ ಚಂದ್ರ ಅವರ ಅತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಕುರಿತು ಐಐಟಿ ಖರಗ್‌ಪುರದ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಅಧ್ಯಾಪಕರು ಸಂಪೂರ್ಣ ಆಘಾತದ ಭಾವನೆಯೊಂದಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ" ಎಂದು ಐಐಟಿ ಖರಗ್‌ಪುರ ಹೇಳಿಕೆಯಲ್ಲಿ ತಿಳಿಸಿದೆ.

ಕಿರಣ್ ಚಂದ್ರ ಅವರು ಲಾಲ್ ಬಹದ್ದೂರ್ ಶಾಸ್ತ್ರಿ (ಎಲ್‌ಬಿಎಸ್) ನಿವಾಸದ ಹಾಲ್‌ನಲ್ಲಿ ತಂಗಿದ್ದರು ಮತ್ತು ಅವರು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. "ಚಂದ್ರ ತನ್ನ ಇಬ್ಬರು ಕೊಠಡಿ ಸಹಪಾಠಿಗಳೊಂದಿಗೆ ತಮ್ಮ ಹಾಸ್ಟೆಲ್ ಕೋಣೆಯಲ್ಲಿದ್ದರು. ನಂತರ, ಇತರ ಇಬ್ಬರು ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗಾಗಿ ಹೊರಗೆ ತೆರಳಿದರು. ತರುವಾಯ, ರಾತ್ರಿ 8.30 ರ ಸುಮಾರಿಗೆ, LBS ಹಾಲ್‌ನ ಸಿಬ್ಬಂದಿ ಕೊಠಡಿ ಬಾಗಿಲು ಹಾಕಿ ಲಾಕ್ ಆಗಿರುವುದನ್ನು ಗಮನಿಸಿದ್ದಾರೆ. ಬಳಿಕ ಅನುಮಾನಗೊಂಡು ಬಾಗಿಲನ್ನು ಹೊಡೆದು ನೋಡಿದಾಗ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದೆ.

ಕೂಡಲೇ ಕಿರಣ್ ಚಂದ್ರರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ರಾತ್ರಿ 11:30 ರ ಸುಮಾರಿಗೆ ಚಂದ್ರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಐಐಟಿ ಖರಗ್‌ಪುರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ದಾವಣಗೆರೆ: ಅಭ್ಯಾಸಕ್ಕೆಂದು ತೆರಳಿ ಅಖಾಡದಲ್ಲಿಯೇ 13 ವರ್ಷದ ಕುಸ್ತಿಪಟು ಆತ್ಮಹತ್ಯೆ
 
ಐಐಟಿಗಳಲ್ಲಿ 34 ಆತ್ಮಹತ್ಯೆ
ಇನ್ನು ದೇಶ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಐಐಟಿಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಡಿಸೆಂಬರ್ 2021 ರಲ್ಲಿ ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಅನ್ವಯ 2014 ರಿಂದ, ಐಐಟಿಗಳು 34 ಆತ್ಮಹತ್ಯೆಗಳನ್ನು ಕಂಡಿವೆ, ಅದರಲ್ಲಿ 18 ಇತರ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ವಿದ್ಯಾರ್ಥಿಗಳಾಗಿದ್ದಾರೆ. ಭಾರತದಲ್ಲಿ ಶೈಕ್ಷಣಿಕ ವೈಫಲ್ಯದಿಂದ ಪ್ರತಿದಿನ ಆರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸುತ್ತವೆ.

2014 ಮತ್ತು ಅಕ್ಟೋಬರ್ 2022 ರ ನಡುವೆ ಆಂಧ್ರಪ್ರದೇಶ ಮತ್ತು ತೆಲಂಗಾಣದ 15 ವಿದ್ಯಾರ್ಥಿಗಳು ಐಐಟಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019 ರ ಡಿಸೆಂಬರ್‌ನಲ್ಲಿ, ಮಾನವ ಸಂಪನ್ಮೂಲ ಸಚಿವರು ಸಂಸತ್ತಿನಲ್ಲಿ ಐಐಟಿಗಳು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಗಳು) 2019 ರವರೆಗಿನ ಐದು ವರ್ಷಗಳಲ್ಲಿ 60 ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ಕಂಡಿದ್ದಾರೆ ಎಂದು ಹೇಳಿದರು.

ಇವುಗಳಲ್ಲಿ 50 ವಿದ್ಯಾರ್ಥಿಗಳ ಆತ್ಮಹತ್ಯೆ  23 ಐಐಟಿಗಳಲ್ಲೇ ಸಂಭವಿಸಿದೆ. 20 ಐಐಎಂಗಳು 10 ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ವರದಿ ಮಾಡಿದೆ. ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಖರಗ್‌ಪುರ, ಐಐಟಿ ಮದ್ರಾಸ್ ಮತ್ತು ಐಐಟಿ ಹೈದರಾಬಾದ್‌ಗಳಲ್ಲಿ 2019 ರವರೆಗಿನ ಐದು ವರ್ಷಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ ವರದಿಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com