Maharashtra Politics: ಶಿವಸೇನೆ ಬಂಡಾಯ ಶಾಸಕರ ಅನರ್ಹತೆ ಅರ್ಜಿ: ಸ್ಪೀಕರ್ ಗೆ ಡಿ.31ರ ಡೆಡ್‌ಲೈನ್‌ ನೀಡಿದ ಸುಪ್ರೀಂ ಕೋರ್ಟ್‌

ಮಹಾರಾಷ್ಟ್ರದ ಶಿವಸೇನೆ ಪಕ್ಷದ ಬಂಡಾಯ ಶಾಸಕರ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ಮಹತ್ವದ ನಿರ್ಣಯ ಪ್ರಕಟಿಸಿದ್ದು, ಅರ್ಜಿ ಸಂಬಂಧ ಡಿಸೆಂಬರ್ 31ರೊಳಗೆ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಉದ್ಧವ್ ಠಾಕ್ರೆ vs ಏಕನಾಥ ಶಿಂಧೆ
ಉದ್ಧವ್ ಠಾಕ್ರೆ vs ಏಕನಾಥ ಶಿಂಧೆ

ಮುಂಬೈ: ಮಹಾರಾಷ್ಟ್ರದ ಶಿವಸೇನೆ (Shivsena) ಪಕ್ಷದ ಬಂಡಾಯ ಶಾಸಕರ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ಮಹತ್ವದ ನಿರ್ಣಯ ಪ್ರಕಟಿಸಿದ್ದು, ಅರ್ಜಿ ಸಂಬಂಧ ಡಿಸೆಂಬರ್ 31ರೊಳಗೆ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.

ಮಹಾರಾಷ್ಟ್ರ (Maharashtra)ದ ಶಿವಸೇನೆ ಪಕ್ಷದ (Shiv sena party) ಬಂಡಾಯ ಶಾಸಕರ (Maharashtra Politics) ಅನರ್ಹತೆ ಅರ್ಜಿ ತೀರ್ಮಾನಕ್ಕೆ ಸ್ಪೀಕರ್‌ಗೆ ಡಿಸೆಂಬರ್ 31ರ ಡೆಡ್‌ಲೈನ್‌ ವಿಧಿಸಿ ಸುಪ್ರೀಂ ಕೋರ್ಟ್‌ (supreme court) ನಿರ್ದೇಶನ ನೀಡಿದ್ದು, ಇದರಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ವಿರುದ್ಧ ಸಲ್ಲಿಸಲಾದ ಒಂದು ಅರ್ಜಿಯೂ ಸೇರಿದೆ.

ಫೆಬ್ರವರಿ 29, 2024ರೊಳಗೆ ಅನರ್ಹತೆ ಅರ್ಜಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಬಹುದು ಎಂಬ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಅನರ್ಹತೆ ಅರ್ಜಿಗಳನ್ನು ವಿಳಂಬಗೊಳಿಸಲು ಕಾರ್ಯವಿಧಾನದ ಜಗಳಗಳಿಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠ ಹೇಳಿದೆ.

“ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಾವು ಕಾಳಜಿ ವಹಿಸುತ್ತೇವೆ. ಇಲ್ಲದಿದ್ದರೆ ನಾವು ಆ ನಿಬಂಧನೆಗಳನ್ನು ಗಾಳಿಗೆ ತೂರುತ್ತೇವೆ. ರಾಜಕೀಯ ಪಕ್ಷಾಂತರಗಳನ್ನು ತಡೆಯಲು ಹತ್ತನೇ ಶೆಡ್ಯೂಲ್‌ ಅನ್ನು ರೂಪಿಸಲಾಗಿದೆ. ಅರ್ಜಿಗಳನ್ನು ವಿಳಂಬಗೊಳಿಸಲು ಪ್ರಕ್ರಿಯೆಯ ಜಟಿಲತೆಯನ್ನು ಮುಂದಕ್ಕೆ ತರಬಾರದು. ಡಿಸೆಂಬರ್ 31, 2023ರೊಳಗೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಬೇಕು ಮತ್ತು ನಿರ್ದೇಶನಗಳನ್ನು ಅಂಗೀಕರಿಸಬೇಕು ಎಂದು ನಾವು ನಿರ್ದೇಶಿಸುತ್ತೇವೆ” ಎಂದು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೇಳಿತು.

ಏನಿದು ಪ್ರಕರಣ?
ಕಳೆದ ವರ್ಷ ಏಕನಾಥ ಶಿಂದೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಬಂಡಾಯ ಎದ್ದು ಬಿಜೆಪಿ (BJP)ಗೆ ಬೆಂಬಲ ಘೋಷಿಸಿದ್ದರು. ಈ ಪ್ರಕರಣ ಸಂಬಂಧ ಏಕನಾಥ ಶಿಂಧೆ ಹಾಗೂ 15 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಮಹಾವಿಕಾಸ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಬೇಕು ಎಂದು ಕೋರಿ ಉದ್ಧವ್ ಠಾಕ್ರೆ (Uddhav Thackeray) ಬಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ಸಂಬಂಧ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್‌, ಉದ್ಧವ್‌ ಠಾಕ್ರೆ ವಿಶ್ವಾಸಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ್ದರಿಂದ ಸರ್ಕಾರವನ್ನು ಮರುಸ್ಥಾಪಿಸಲಾಗದು ಎಂದು ಹೇಳಿತ್ತು. ಅಲ್ಲದೆ ಶಾಸಕರ ಅನರ್ಹತೆ ಕುರಿತು ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸ್ಪೀಕರ್‌ಗೆ ಸೂಚನೆ ನೀಡಿತ್ತು.

ನಿರ್ಧಾರದ ವಿಳಂಬದ ವಿರುದ್ಧ ಶಿವಸೇನೆಯ(ಉದ್ದವ್‌ ಬಣದ)  ಸುನೀಲ್ ಪ್ರಭು ಮತ್ತು ಎನ್‌ಸಿಪಿಯ ಜಯಂತ್ ಪಾಟೀಲ್ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಪುನರಾರಂಭಿಸಿದ ಪೀಠವು, ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಾವು ಸ್ಪೀಕರ್‌ಗೆ ಪದೇ ಪದೇ ಸಮಯ ನೀಡಿದ್ದೇವೆ. ಈಗ ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿಯವರು ಅಫಿಡವಿಟ್ ಸಲ್ಲಿಸಿದ್ದಾರೆ. ಅನರ್ಹತೆ ಅರ್ಜಿಗಳಲ್ಲಿ ಶಿವಸೇನೆಯ ಮತ್ತು ಎನ್‌ಸಿಪಿಯದ್ದು ಇದೆ ಎಂದು ಅದು ಹೇಳುತ್ತದೆ. ದೀಪಾವಳಿ ರಜೆಯಲ್ಲಿ ಸೆಕ್ರೆಟರಿಯೇಟ್‌ನ್ನು ಮುಚ್ಚಲಾಗುವುದು ಮತ್ತು ಚಳಿಗಾಲದ ವಿಧಾನಸಭೆಯ ಅಧಿವೇಶನವು ನಾಗ್ಪುರದಲ್ಲಿ ನಡೆಯಲಿದೆ ಎಂದು ಅಫಿಡವಿಟ್ ಹೇಳುತ್ತದೆ. ಇದು ಅನರ್ಹತೆಯ ನಿರ್ಧಾರದಲ್ಲಿ ವಿಳಂಬಕ್ಕೆ ಕಾರಣವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಕೋರ್ಟ್ ಹೇಳಿದೆ.

ಚುನಾವಣೆ ಘೋಷಣೆಯಾಗುವವರೆಗೆ ಈ ಪ್ರಕ್ರಿಯೆಗಳು ಮುಂದುವರಿಯುತ್ತಾ  ಎಂಬುದು ನಮ್ಮ ಕಳವಳವಾಗಿದೆ ಎಂದು ಪೀಠ ಹೇಳಿದೆ. ಠಾಕ್ರೆ ಬಣದ ಪರ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal) ಕೋರ್ಟ್‌ಗೆ ಹಾಜರಾಗಿದ್ದು, ಸ್ಪೀಕರ್ ನಿರಂಕುಶವಾಗಿ ವರ್ತಿಸುತ್ತಿದ್ದಾರೆ ಮತ್ತು ಕಲಾಪವನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com