ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ ಪ್ರಕರಣ: ದೇಶದ 30 ಸ್ಥಳಗಳಲ್ಲಿ ಎನ್‌ಐಎ ದಾಳಿ, ಶೋಧ ಕಾರ್ಯಾಚರಣೆ

ಅರೇಬಿಕ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ ಹಾಗೂ ನೇಮಕಾತಿ ಮಾಡಿಕೊಳ್ಳುತ್ತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ದೇಶದ 30 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅರೇಬಿಕ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ ಹಾಗೂ ನೇಮಕಾತಿ ಮಾಡಿಕೊಳ್ಳುತ್ತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ದೇಶದ 30 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದೆ.

ತಮಿಳುನಾಡಿನ ಮತ್ತು ತೆಲಂಗಾಣ ಸೇರಿದಂತೆ ಸುಮಾರು 30 ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಹೈದರಾಬಾದ್‌ನ ನಾಲ್ಕು ಸ್ಥಳಗಳಲ್ಲಿ ಜೊತೆಗೆ ತಮಿಳುನಾಡಿನ ಕೊಯಮತ್ತೂರಿನ 22 ಸ್ಥಳಗಳನ್ನು ಒಳಗೊಂಡಂತೆ ಚೆನ್ನೈನ ಮೂರು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಬೆಳಗ್ಗೆ ಶೋಧ ಕಾರ್ಯ ಆರಂಭಿಸಿದೆ. ಇಸಿಸ್ ಉಗ್ರ ಸಂಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕೊಯಮತ್ತೂರಿನ ಉಕ್ಕಡಮ್‌ನಲ್ಲಿರುವ ಈಶ್ವರನ್ ಕೋವಿಲ್ ಸ್ಟ್ರೀಟ್‌ನಲ್ಲಿರುವ ಕೊಟ್ಟೈ ಸಂಗಮೇಶ್ವರರ್ ದೇವಸ್ಥಾನದ ಮುಂಭಾಗದಲ್ಲಿ 2022 ರ ಅಕ್ಟೋಬರ್ 23 ರಂದು ಸ್ಫೋಟ ಸಂಭವಿಸಿತ್ತು. ಈ ಸಂದರ್ಭ ಸುಧಾರಿತ ಸ್ಫೋಟಕ ಸಾಧನದೊಂದಿಗೆ ಕಾರನ್ನು ಓಡಿಸಿದ ಐಸಿಸ್ ಅನುಯಾಯಿ ಜಮೇಶಾ ಮುಬೀನ್ ಸಾವನ್ನಪ್ಪಿದ್ದ. ತನಿಖೆ ನಡೆಸುತ್ತಿದ್ದ ಸಂದರ್ಭ ಅವನು ಕೊಯಮತ್ತೂರಿನ ಕುನಿಯಮುತ್ತೂರಿನಲ್ಲಿ ಕೋವೈ ಅರೇಬಿಕ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಕೆಲ ವರ್ಷಗಳ ಹಿಂದೆ ಕಾಲೇಜಿನಲ್ಲಿ ಮುಬೀನ್ ಜೊತೆ 25ಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇದರ ನಡುವೆ, ಚೆನ್ನೈನ ಎನ್‌ಐಎ ಅಧಿಕಾರಿಗಳು ಕೊಯಮತ್ತೂರಿನ ಅರೇಬಿಕ್ ಕಾಲೇಜಿನಲ್ಲಿ ಕಳೆದ ತಿಂಗಳು ಶೋಧ ಕಾರ್ಯ ನಡೆಸಿದ್ದರು ಎಂದು ತಿಳಿದುಬಂದಿದೆ. ತಮಿಳುನಾಡು ಇಸಿಸ್ ಉಗ್ರ ಸಂಘಟನೆ ಮತ್ತು ಅದರ ನೇಮಕಾತಿ ಮತ್ತು ಆಮೂಲಾಗ್ರೀಕರಣ ಒಳಗೊಂಡಂತೆ ಸಂಸ್ಥೆಯು ದಾಖಲೆಗಳನ್ನು ಸಂಗ್ರಹ ಮಾಡಿದ್ದು, ಹೊಸ ಎಫ್‌ಐಆರ್ ಅನ್ನು ದಾಖಲು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಕೊಯಮತ್ತೂರು ನಗರದ ಕರುಂಬುಕ್ಕಡೈ, ಜಿಎಂ ನಗರ, ಕಿನಾತುಕಡವು, ಕವುಂಡಂಪಾಳ್ಯಂ, ಉಕ್ಕಡಂ ಮತ್ತು ಇನ್ನೂ ಕೆಲವು ಪ್ರದೇಶಗಳು ಸೇರಿ 22 ಸ್ಥಳಗಳಲ್ಲಿ ಎಫ್‌ಐಆರ್ ಆದ ನಂತರ, ಎನ್‌ಐಎ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

ತಮಿಳುನಾಡು ರಾಜಧಾನಿ ಚೆನ್ನೈನ ನೀಲಂಕಾರೈ, ಅಯನವರಂ ಮತ್ತು ತಿರುವಿ ಕಾ ನಗರ್‌ನಲ್ಲಿ ಕೂಡ ಶೋಧ ನಡೆಸಿದ್ದಾರೆ. ಇದರ ಜೊತೆಗೆ ಕೊಯಮತ್ತೂರು ನಗರದ ಪೆರುಮಾಳ್ ಕೋವಿಲ್ ಸ್ಟ್ರೀಟ್‌ನಲ್ಲಿರುವ ಕೊಯಮತ್ತೂರು ಕಾರ್ಪೊರೇಷನ್ 82ನೇ ವಾರ್ಡ್ನ ಡಿಎಂಕೆ ಕೌನ್ಸಿಲರ್ ಎಂ. ಮುಬಸೀರಾ ನಿವಾಸದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಶೋಧ ನಡೆಸುತ್ತಿದೆ ಎನ್ನಲಾಗಿದೆ. ಈ ಕೌನ್ಸಿಲರ್‌ನ ಪತಿ ಕೂಡ ಅರೇಬಿಕ್ ಕಾಲೇಜಿನಲ್ಲಿ ಓದುತ್ತಿದ್ದರೆನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com