ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣ: ನಮ್ಮದು ಪ್ರಜಾಸತ್ತಾತ್ಮಕ ದೇಶ, ಕಾನೂನಿನ ನಿಯಮಕ್ಕೆ ಬದ್ಧತೆ ಇದೆ; ಕೆನಡಾ ಆರೋಪ ನಿರಾಕರಿಸಿದ ಭಾರತ

ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ್ದು, ಆರೋಪದ ಬೆನ್ನಲ್ಲೇ ನವದೆಹಲಿಯ ಗುಪ್ತಚರ ಅಧಿಕಾರಿಯನ್ನು ಉಚ್ಛಾಟಿಸಿದೆ. ಕೆನಡಾದ ಈ ಆರೋಪವನ್ನು ಭಾರತ ನಿರಾಕರಿಸಿದೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ್ದು, ಆರೋಪದ ಬೆನ್ನಲ್ಲೇ ನವದೆಹಲಿಯ ಗುಪ್ತಚರ ಅಧಿಕಾರಿಯನ್ನು ಉಚ್ಛಾಟಿಸಿದೆ. ಕೆನಡಾದ ಈ ಆರೋಪವನ್ನು ಭಾರತ ನಿರಾಕರಿಸಿದೆ.

ಕೆನಡಾದ ಆರೋಪ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಇಂತಹ ಆರೋಪಗಳು ನಮ್ಮ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗುತ್ತವೆ ಎಂದು ಹೇಳಿದೆ.

ಕೆನಡಾ ಸಂಸತ್ತಿನಲ್ಲಿ ಆ ರಾಷ್ಟ್ರದ ಪ್ರಧಾನಿ ನೀಡಿರುವ ಹೇಳಿಕೆಯನ್ನು ನೋಡಿದ್ದೇವೆ. ಕೆನಡಾ ಪ್ರಧಾನಿ ಹಾಗೂೂ ಕೆನಡಾ ರಾಷ್ಟ್ರದ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಯನ್ನು ತಿರಸ್ಕರಿಸುತ್ತಿದ್ದೇವೆ. ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂಬ ಆರೋಪಗಳು ಅಸಂಬದ್ಧವಾದದ್ದು. ನಾವು ಕಾನೂನಿನ ಆಳ್ವಿಕೆಗೆ ಬದ್ಧತೆ ಹೊಂದಿರುವ ಪ್ರಜಾಸತ್ತಾತ್ಮಕ ರಾಜಕೀಯ ಹೊಂದಿದ್ದೇವೆಂದು ತಿಳಿಸಿದೆ.

ಇಂತಹ ಆಧಾರರಹಿತ ಆರೋಪಗಳು ಕೆನಡಾದಲ್ಲಿ ಆಶ್ರಯ ಪಡೆದಿರುವ ಮತ್ತು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಪಾಯ ಉಂಟುಮಾಡುವ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರರ ಗಮನವನ್ನು ಬೇರೆಡೆ ಸೆಳೆಯುತ್ತಿವೆ.

ಈ ವಿಷಯದ ಬಗ್ಗೆ ಕೆನಡಾ ಸರ್ಕಾರ ಕ್ರಮ ತೆಗೆದುಕೊಳ್ಳದಿರುವುದು ಚಿಂತೆಗೀಡು ಮಾಡುವ ವಿಚಾರವಾಗಿದೆ. ಕೆನಡಾದಲ್ಲಿ ಕೊಲೆ, ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇದೇ ರೀತಿಯ ಆರೋಪಗಳನ್ನು ಕೆನಡಾದ ಪ್ರಧಾನಿಯವರು ನಮ್ಮ ಪ್ರಧಾನಿಯವರ ಮೇಲೆ ಮಾಡಿದ್ದು, ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ನಮ್ಮದು ಪ್ರಜಾಸತ್ತಾತ್ಮಕ ದೇಶವಾಗಿದ್ದು, ಕಾನೂನಿನ ನಿಯಮಕ್ಕೆ ಬಲವಾದ ಬದ್ಧತೆ ಇದೆ ಎಂದಿದೆ.

ಜೂನ್‌ನಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ಮೋಸ್ಟ್‌ ವಾಂಟೆಡ್ ಟೆರರಿಸ್ಟ್‌ ಪಟ್ಟಿಯಲ್ಲಿದ್ದ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಜೂನ್‌ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಿಜ್ಜರ್‌ ಮೇಲೆ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪವಿತ್ತು.

ಸೋಮವಾರ ಮಧ್ಯಾಹ್ನ ನಡೆದ ಸಂಸತ್‌ ಅಧಿವೇಶನದಲ್ಲಿ ಮಾತನಾಡಿದ್ದ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೊ, ‘ಖಾಲಿಸ್ತಾನಿ ಭಯೋತ್ಪಾದಕ ಹತ್ಯೆಯ ಹಿಂದೆ ಭಾರತೀಯ ಏಜೆಂಟರುಗಳ ಕೈವಾಡವಿದೆ ಎಂಬುವುದಕ್ಕೆ ನಮ್ಮ ಸರ್ಕಾರದ ಬಳಿ ಸಾಕ್ಷಿಗಳಿವೆ’ ಎಂದು ಹೇಳಿದ್ದರು.

ಜಸ್ಟಿನ್ ಟ್ರಡೋ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ‘ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿಲುವು ತಾಳಿದೆ. ಇಂದು ಭಾರತದ ಹಿರಿಯ ಗುಪ್ತಚರ ಅಧಿಕಾರಿಯನ್ನು ಕೆನಡಾದಿಂದ ಉಚ್ಚಾಟನೆ ಮಾಡಲಾಗಿದೆ. ಇವರು ಭಾರತದ ವಿದೇಶಿ ಗುಪ್ತಚರ ಸಂಸ್ಥೆ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ (RAW)ನ ಮುಖ್ಯಸ್ಥರಾಗಿದ್ದರು’ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com