

ತಿರುಚ್ಚಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆಗ್ರಹಿಸಿ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ರೈತರು ಮಂಗಳವಾರ ತಿರುಚ್ಚಿಯಲ್ಲಿ ಬಾಯಿಯಲ್ಲಿ ಇಲಿಗಳನ್ನು ಹಿಡಿದು ಅನಿರೀಕ್ಷಿತ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಣೆ ರೈತರ ಸಂಘದ ತಮಿಳುನಾಡು ಘಟಕದ ಅಧ್ಯಕ್ಷ ಅಯ್ಯಕಣ್ಣು ನೇತೃತ್ವದಲ್ಲಿ ತಿರುಚ್ಚಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.
ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಕುರುವಾಯಿ ಬೆಳೆ ಉಳಿಸಲು ಕಾವೇರಿ ನೀರು ಹರಿಸುವಂತೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಇದಕ್ಕೂ ಮುನ್ನ, ಭಾನುವಾರ ತಿರುಚ್ಚಿಯಲ್ಲಿ ರೈತರ ಗುಂಪು ಕಾವೇರಿ ನದಿ ನೀರಿನಲ್ಲಿ ಇಳಿದು ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಇದೇ ವೇಳೆ ಕರ್ನಾಟಕದ ಅಣೆಕಟ್ಟುಗಳಿಂದ ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ಇಂದು ಬೆಂಗಳೂರು ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 13 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು(ಸಿಡಬ್ಲ್ಯುಎಂಎ) ತನ್ನ ನೆರೆಯ ರಾಜ್ಯ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 5000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದಾಗಿನಿಂದ ಕರ್ನಾಟಕದಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.