ಗೋವುಗಳನ್ನು ಕಸಾಯಿಖಾನೆಗೆ ಮಾರುವ ಮೂಲಕ ಇಸ್ಕಾನ್ ಅತಿದೊಡ್ಡ ವಂಚನೆ; ಮನೇಕಾ ಗಾಂಧಿ ಆರೋಪ ತಳ್ಳಿಹಾಕಿದ ಇಸ್ಕಾನ್

ಗೋವುಗಳ ಸಾಕಣೆ ಹೆಸರಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ ಎಂಬ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಗಳನ್ನು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್ ತಳ್ಳಿಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗೋವುಗಳ ಸಾಕಣೆ ಹೆಸರಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ ಎಂಬ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಗಳನ್ನು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್ ತಳ್ಳಿಹಾಕಿದ್ದಾರೆ.

ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್‌ನ ಗೋಶಾಲೆಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಗಾಂಧಿ, ಅಲ್ಲಿ ಹಾಲು ನೀಡದ ಯಾವುದೇ ಹಸು ಅಥವಾ ಕರುಗಳು ಕಾಣಿಸುವುದಿಲ್ಲ. ಇಸ್ಕಾನ್ ತಮ್ಮ ಗೋಶಾಲೆಗಳಿಂದ ಕಟುಕರಿಗೆ ಹಸುಗಳನ್ನು ಮಾರಾಟ ಮಾಡುತ್ತದೆ ಎಂದು ಆರೋಪಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗ ವೈರಲ್ ಆಗಿದೆ. 

'ಇಂದು ಭಾರತದಲ್ಲಿನ ದೊಡ್ಡ ವಂಚನೆ ಎಂದರೆ ಅದು ಇಸ್ಕಾನ್. ಅವರು ಗೋಶಾಲೆಗಳನ್ನು ಸ್ಥಾಪಿಸುತ್ತಾರೆ. ಆ ಮೂಲಕ ಅವುಗಳನ್ನು ನಡೆಸಲು ಸರ್ಕಾರದಿಂದ ಅನಿಯಮಿತ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರು ಬೃಹತ್ ಭೂಮಿಯನ್ನು ಪಡೆಯುತ್ತಾರೆ. ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಗೆ ನಾನು ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ಕೊಡದ ಒಂದೇ ಒಂದು ಹಸುಗಳಾಗಲೀ ಅಥವಾ ಕರುಗಳಾಗಲಿ ಇಲ್ಲ. ಅಲ್ಲಿದ್ದವುಗಳೆಲ್ಲಾ ಹಾಲು ಕೊಡುವಂತವುಗಳು. ಇಸ್ಕಾನ್ ತನ್ನ ಎಲ್ಲಾ ಗೊಡ್ಡು ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು. ಇವರು ಹೀಗೆ ಮಾಡಿದಷ್ಟು ಬೇರೆ ಯಾರೂ ಈವರೆಗೂ ಮಾಡಿಲ್ಲ' ಎಂದು ಮನೇಕಾ ಆರೋಪಿಸಿದ್ದಾರೆ.

ಅವರು ರಸ್ತೆಯಲ್ಲಿ 'ಹರೇ ರಾಮ ಹರೇ ಕೃಷ್ಣ' ಎಂದು ಹಾಡುತ್ತಾ ಹೋಗುತ್ತಾರೆ ಮತ್ತು ತಮ್ಮ ಇಡೀ ಜೀವನವು ಹಸುಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳುತ್ತಾರೆ. ಆದರೆ, ಕಸಾಯಿಖಾನೆಗೆ ಇವರಷ್ಟು ಹಸುಗಳನ್ನು ಬೇರೆ ಯಾರೂ ಮಾರಾಟ ಮಾಡಿಲ್ಲ. ಇವರೇ ಈ ರೀತಿ ಮಾಡಲು ಸಾಧ್ಯವಾದರೆ, ಇತರರು ಏನು ಮಾಡುತ್ತಾರೆ? ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುದಿಷ್ಟಿರ ಗೋವಿಂದ ದಾಸ್ ಟ್ವೀಟ್ ಮಾಡಿದ್ದು, ಇಸ್ಕಾನ್ ಹಸು ಮತ್ತು ಗೂಳಿಗಳ ರಕ್ಷಣೆ ಮತ್ತು ಆರೈಕೆಯಲ್ಲಿ ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಹಸುಗಳು ಮತ್ತು ಎತ್ತುಗಳನ್ನು ನೋಡಿಕೊಳ್ಳಲಾಗುತ್ತದೆ ಹೊರತು ಕಸಾಯಿಖಾನೆಗೆ ಮಾರಾಟ ಮಾಡಲಾಗುವುದಿಲ್ಲ' ಎಂದಿದ್ದಾರೆ. 

ಮನೇಕಾ ಗಾಂಧಿ ಅವರ ಈ ಆರೋಪ ಸುಳ್ಳು ಮತ್ತು ಆಧಾರ ರಹಿತವಾಗಿದೆ. ಅವರ ಇಂತಹ ಹೇಳಿಕೆ ಅಚ್ಚರಿ ಮೂಡಿಸಿದೆ. ಎಲ್ಲಿ ದನದ ಮಾಂಸವೇ ಪ್ರಮುಖ ಆಹಾರವಾಗಿದೆಯೋ ಅಂತಹ ರಾಷ್ಟ್ರಗಳಲ್ಲಿ ಕೂಡ ಇಸ್ಕಾನ್ ಗೋ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಅನಾಥವಾಗಿರುವ, ಗಾಯಗೊಂಡಿರುವ ಮತ್ತು ರಕ್ಷಿಸಲಾದ ಗೋವುಗಳನ್ನು ಇಸ್ಕಾನ್‌ನ ಗೋಶಾಲೆಗೆ ಸೇರಿಸುವ ಪದ್ಧತಿ ಈಗಲೂ ಇದೆ ಎಂದಿದ್ದಾರೆ.

ಮನೇಕಾ ಗಾಂಧಿಯವರು ಅನಂತಪುರದ ಗೋಶಾಲೆಗೆ ಭೇಟಿ ನೀಡಿದ್ದರ ಬಗ್ಗೆ ಅಲ್ಲಿನ ಕೆಲಸಗಾರರಿಗೆ ತಿಳಿದಿಲ್ಲ ಎಂದಿರುವ ಅವರು, ಹಾಲು ಕೊಡದ ಹಸುಗಳೊಂದಿಗೆ ಅನಂತಪುರ ಗೋಶಾಲೆಯ ಸೆಪ್ಟೆಂಬರ್ 24ರ ಸಿಸಿಟಿವಿ ದೃಶ್ಯಾವಳಿಗಳನ್ನೂ ದಾಸ್ ಹಂಚಿಕೊಂಡಿದ್ದಾರೆ.

ಇಸ್ಕಾನ್ ಸಾಗರೋತ್ತರ ಸಂಯೋಜಕ ವಿಜಯ್ ತೊಟ್ಟತ್ತಿಲ್ ಅವರು ಟ್ವಿಟರ್‌ನಲ್ಲಿ ಮನೇಕಾ ಗಾಂಧಿಯವರ ವಿಡಿಯೋವನ್ನು ಹಂಚಿಕೊಂಡಿದ್ದು, 'ಈ ಆರೋಪಗಳನ್ನು ಬಿಜೆಪಿಯ ಮಾಜಿ ಕೇಂದ್ರ ಸಚಿವೆ, ಅದರಲ್ಲೂ ಮನೇಕಾ ಗಾಂಧಿ ಮಾಡಿರುವುದು ದೊಡ್ಡ ವಿಚಾರವಾಗಿದೆ. ಇಷ್ಟೆಲ್ಲಾ ನಡೆಯುವಾಗ ಗೋ ರಕ್ಷಕರು ಎಲ್ಲಿದ್ದಾರೆ?. ಅವರು ಇಸ್ಕಾನ್‌ನ ಈ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿಲ್ಲವೇ?. ಆ ಆರೋಪಗಳ ಬಗ್ಗೆ ಸರ್ಕಾರ ತನಿಖೆ ನಡೆಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com