ಮನ್ ಕಿ ಬಾತ್'ಗೆ 100ರ ಸಂಭ್ರಮ: ಒಗ್ಗಟ್ಟಿನಿಂದ ದೇಶದ ಅಭಿವೃದ್ದಿಯತ್ತ ಸಾಗೋಣ, ನವಭಾರತ ನಿರ್ಮಾಣ ಮಾಡೋಣ: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೇಡಿಯೇ ಕಾರ್ಯಕ್ರಮದ 100ನೇ ಆವೃತ್ತಿ ಭಾನುವಾರ ಆರಂಭವಾಗಿದ್ದು, ದೇಶದ ಜನತೆಗೆ ಪ್ರಧಾನಿ ಮೋದಿಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.
Published: 30th April 2023 11:18 AM | Last Updated: 02nd May 2023 08:38 PM | A+A A-

ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ರೇಡಿಯೇ ಕಾರ್ಯಕ್ರಮದ 100ನೇ ಆವೃತ್ತಿ ಭಾನುವಾರ ಆರಂಭವಾಗಿದ್ದು, ದೇಶದ ಜನತೆಗೆ ಪ್ರಧಾನಿ ಮೋದಿಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.
100ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಮೋದಿಯವರು, ನಿಮ್ಮ ಪತ್ರಗಳನ್ನು ಕಂಡಾಗ ನಾನು ಭಾವುಕನಾಗಿದ್ದೇನೆ. ಮನ್ ಕಿ ಬಾತ್ ಕೋಟ್ಯಂತರ ಭಾರತೀಯರ ಮನದಾಳದ ಭಾವನೆಗಳ ಅಭಿವ್ಯಕ್ತಿಯಾಗಿದೆ. ಭಾರತೀಯರ ಸಕಾರಾತ್ಮಕ ಭಾವನೆಗಳ ದ್ಯೋತಕ ಇದಾಗಿದೆ. ಜನತೆಯ ಜತೆಗೆ ನಿಕಟ ಸಂವಹನ ನಡೆಸಲು ಮನ್ ಕಿ ಬಾತ್ ನಿಂದ ಸಾಧ್ಯವಾಗಿದೆ. 2014ರಲ್ಲಿ ದೆಹಲಿಗೆ ಬಂದ ಬಳಿಕ ನನ್ನ ಕಾರ್ಯಚಟುವಟಿಕೆಗಳು ಅಗಾಧವಾಗಿ ಬದಲಾಗಿತ್ತು. ಅಂತಹ ಸಂದರ್ಭದಲ್ಲಿ ಜನ ಸಾಮಾನ್ಯರೊಡನೆ ಬೆರೆಯಲು, ಭಾವನೆಗಳನ್ನು ಹಂಚಲು ಮನ್ ಕಿ ಬಾತ್ ಮೂಲಕ ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಮನ್ ಕಿ ಬಾತ್ ನನಗೆ ಒಂದು ವ್ರತ, ಪೂಜೆ ಆಗಿದೆ. ಈಶ್ವರ ರೂಪಿ ಜನರ ಜತೆ ಮಾತನಾಡಲು ಇದರಿಂದ ಸಾಧ್ಯವಾಗಿದೆ. ಇಂದು ನಾವು 100ನೇ ಪ್ರಸಾರಕ್ಕೆ ತಲುಪಿದ್ದೇವೆ. ಈ ಮನ್ ಕೀ ಬಾತ್ನಲ್ಲಿ ನಾನು ಮಾತನಾಡುವಾಗ ಸಾಕಷ್ಟು ಬಾರಿ ಬಾವುಕನಾಗಿದ್ದೇನೆ. ಸಾಮಾಜದ ಅನೇಕ ರಿಯಲ್ ಹೀರೋಗಳನ್ನು ನೆನೆಯಲು ಮನ್ ಕೀ ಬಾತ್ ಒಂದು ಉತ್ತಮ ಕಾರ್ಯಕ್ರಮವಾಗಿದೆ.
ಮನ್ ಕೀ ಬಾತ್ ಮೂಲಕ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಾರಿಶಕ್ತಿಯ ಅನಾವರಣಾವಾಯಿತು. ಹರಿಯಾಣದ ಸುನಿಲ್ ಅವರ "ಸೆಲ್ಫಿ ವಿತ್ ಬೇಟಿ" ಅಭಿಯಾನವನ್ನು ನೆನೆಯಬೇಕು. ಇವರ ಈ ಅಭಿಯಾನಕ್ಕೆ ದೇಶದಲ್ಲಿ ಸಾಕಷ್ಟು ಪ್ರಶಂಸೆ ಪಡೆಯಿತು. ಈ ಕಾರ್ಯಕ್ರಮದ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ ನಡೆಸಲಾಯಿತು. ಆತ್ಮನಿರ್ಭರ್ ಯೋಜನೆ ಕುರಿತು ದೇಶದ ಯುವಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿತು. ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ ನೀಡಲಾಯಿತು. ಗೊಂಬೆಗಳ ತಯಾರಿಕೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಸಾಕಷ್ಟು ಪ್ರಚಾರ ದೊರೆಯಿತು. ಸ್ವಚ್ಛ ಭಾರತಕ್ಕೆ ಮೈಲಿಗಲ್ಲು ದೊರೆಯಿತು.
ಪ್ರವಾಸೋದ್ಯಮ ಕೂಡ ಸಾಕಷ್ಟು ಅಭಿವೃದ್ದಿಯಾಯಿತು. ಹರಿಯಾಣದಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆಯಾಗಿದೆ. ಮನ್ ಕೀ ಬಾತ್ನಿಂದ ಬೇರೆಯವರಿಂದ ಕಲಿಯಲು ಅನುಕೂಲವಾಯಿತು. ಈ ಕಾರ್ಯಕ್ರಮ ಸಮಾಜಕ್ಕೆ ಪ್ರೇರಣೆಯಾಗಿದೆ. ವೋಕಲ್ ಫಾರ್ ಲೋಕಲ್ ಮತ್ತಷ್ಟು ಗಟ್ಟಿಯಾಗಿದೆ.
ಯುನೆಸ್ಕೋ ಡಿಜಿ ಮನ್ ಕೀ ಬಾತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಭಾರತದ ಶಿಕ್ಷಣ ಮತ್ತು ಸಂಸ್ಕೃತಿ ಬಗ್ಗೆ ಧ್ವನಿ ಎತ್ತಿದರು. ಮನ್ ಕೀ ಬಾತ್ ಪ್ರೇಣಾದಾಯಕವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ, ಜಿ20 ಅಧ್ಯಕ್ಷತೆವಹಿಸಿದ ಸುಸಂದರ್ಭದಲ್ಲಿ ಎಲ್ಲರು ಒಟ್ಟಾಗಿ ದೇಶದ ಅಭಿವೃದ್ದಿಯತ್ತ ಸಾಗೋಣ ಮತ್ತು ನವಭಾರತ ನಿರ್ಮಾಣ ಮಾಡೋಣ ಎಂದು ದೇಶದ ಜನತೆಗೆ ಕರೆ ನೀಡಿದರು.
ಮನ್ ಕೀ ಬಾತ್ಗಾಗಿ ತೆರೆ ಹಿಂದೆ ಕಾರ್ಯ ನಿರ್ವಹಿಸಿದ ಪ್ರಸಾರ ಭಾರತಿ ತಂತ್ರಜ್ಞ ತಂಡಕ್ಕೆ ಮತ್ತು ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿದ ಅನುವಾದಕರಿಗೆ ಧನ್ಯವಾದಗಳು. ಮನ್ ಕೀ ಬಾತ್ ಅನ್ನು ಆಲಿಸಿದ ಶೋತೃಗಳಿಗೆ ಧನ್ಯವಾದಗಳು ಎಂದು ಹೇಳಿದರು.
2014ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಮೋದಿಯವರು ಒಮ್ಮೆಯೂ ಇದನ್ನು ತಪ್ಪಿಸದೆ ನಡೆಸಿಕೊಂಡು ಬಂದಿದ್ದು ವಿಶೇಷವಾಗಿದೆ.
ಪ್ರಧಾನಿಯೆಂಬ ಘನ ಹುದ್ದೆಯ ಜವಾಬ್ದಾರಿಗಳು, ಪಕ್ಷಕ್ಕೆ ನೀಡಬೇಕಾದ ಗಮನಗಳು, ಪ್ರವಾಸ, ಸಭೆಗಳು ಏನೇ ಇರಲಿ, ಎಷ್ಟೆಲ್ಲ ಕೆಲಸಗಳೇ ಇರಲಿ ಮೋದಿಯವರು ತಮ್ಮನ್ನು ಜನರೊಂದಿಗೆ ನೇರವಾಗಿ ಸಂಪರ್ಕಿಸುವ ಮನ್ ಕೀ ಬಾತ್ನ್ನು ಒಮ್ಮೆಯೂ ಬಿಡಲಿಲ್ಲ. ಇಂತಹ ಮನ್ ಕೀ ಬಾತ್ ಏಪ್ರಿಲ್ 30ರಂದು ನೂರನೇ ಆವೃತ್ತಿಗೆ ಕಾಲಿಡುತ್ತಿರುವುದನ್ನು ಕೇಂದ್ರ ಸರ್ಕಾರ ವಿಶೇಷವಾಗಿ ಸಂಭ್ರಮಿಸುತ್ತಿದೆ ಮತ್ತು ಅದಕ್ಕಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನೂ ನಡೆಸಿದೆ.