ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಪಕ್ಷಗಳ INDIA ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಎಎಪಿ ಪ್ರಸ್ತಾಪ
ಆಮ್ ಆದ್ಮಿ ಪಕ್ಷವು ಬುಧವಾರ ಅರವಿಂದ ಕೇಜ್ರಿವಾಲ್ ಅವರು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಪ್ರಸ್ತಾಪಿಸಿದ್ದು, ದೆಹಲಿ ಮುಖ್ಯಮಂತ್ರಿಯಾಗಿ ಅವರು ಇಡೀ ದೇಶಕ್ಕೆ ಪ್ರಯೋಜನವಾಗುವಂತಹ ಮಾದರಿಯನ್ನು ನೀಡಿದ್ದಾರೆ ಎಂದು ಹೇಳಿದೆ.
Published: 30th August 2023 03:12 PM | Last Updated: 30th August 2023 09:06 PM | A+A A-

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ಆಮ್ ಆದ್ಮಿ ಪಕ್ಷವು ಬುಧವಾರ ಅರವಿಂದ ಕೇಜ್ರಿವಾಲ್ ಅವರು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಪ್ರಸ್ತಾಪಿಸಿದ್ದು, ದೆಹಲಿ ಮುಖ್ಯಮಂತ್ರಿಯಾಗಿ ಅವರು ಇಡೀ ದೇಶಕ್ಕೆ ಪ್ರಯೋಜನವಾಗುವಂತಹ ಮಾದರಿಯನ್ನು ನೀಡಿದ್ದಾರೆ ಎಂದು ಹೇಳಿದೆ.
ಪಕ್ಷದ ಮುಖ್ಯ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್ ಮಾತನಾಡಿ, ಕೇಜ್ರಿವಾಲ್ ಯಾವಾಗಲೂ 'ಲಾಭದಾಯಕ ಮತ್ತು ಜನಪರ' ಬಜೆಟ್ ಅನ್ನು ಮಂಡಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಭೆಯು ನಾಳೆ ಮುಂಬೈನಲ್ಲಿ ನಡೆಯಲಿದ್ದು, ಅಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಎದುರಿಸಲು ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ವಿರೋಧ ಪಕ್ಷದ ನಾಯಕರು ಜಂಟಿ ಪ್ರಚಾರ ತಂತ್ರವನ್ನು ರೂಪಿಸುವ ನಿರೀಕ್ಷೆಯಿದೆ.
ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಕಕ್ಕರ್, 'ವಕ್ತಾರೆಯಾಗಿ ನಾನು ನಮ್ಮ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಹೆಸರನ್ನು ಪ್ರಸ್ತಾಪಿಸುತ್ತೇನೆ. ಕೇಜ್ರಿವಾಲ್ ನಿರಂತರವಾಗಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ ಮತ್ತು ಮಾದರಿ ಆಡಳಿತ ನೀಡಿದ್ದಾರೆ. ಇದು ದೆಹಲಿಯಲ್ಲಿ ಕನಿಷ್ಠ ಹಣದುಬ್ಬರಕ್ಕೆ ಕಾರಣವಾಯಿತು' ಎಂದು ಅವರು ಹೇಳಿದರು.
'ಅವರು ಎಲ್ಲಾ ರೀತಿಯ ಜನರಿಗೆ ಅನುಕೂಲವಾಗುವಂತಹ ಮಾದರಿಯನ್ನು ದೇಶಕ್ಕೆ ನೀಡಿದ್ದಾರೆ. ಹೀಗಾಗಿ, ಅವರೇ ಪ್ರಧಾನಿ ಅಭ್ಯರ್ಥಿ ಆಗಬೇಕೆಂದು ನಾನು ಬಯಸುತ್ತೇನೆ. ಆದರೆ, ನಿರ್ಧಾರ ನನ್ನ ಕೈಯಲ್ಲಿಲ್ಲ' ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಯಾವಾಗ ಬೇಕಾದರೂ ಲೋಕಸಭೆ ಚುನಾವಣೆ ನಡೆಯಬಹುದು: ನಿತೀಶ್ ಕುಮಾರ್
ಎಎಪಿಯ ದೆಹಲಿ ಸಂಚಾಲಕ ಗೋಪಾಲ್ ರೈ ಮಾತನಾಡಿ, 'ಪ್ರತಿಯೊಂದು ಪಕ್ಷವೂ ತಮ್ಮ ನಾಯಕ ಪ್ರಧಾನಿಯಾಗಬೇಕೆಂದು ಬಯಸುತ್ತದೆ. ಎಎಪಿ ಸದಸ್ಯರು ಕೂಡ ತಮ್ಮ ರಾಷ್ಟ್ರೀಯ ಸಂಚಾಲಕರು ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಇಂಡಿಯಾ ಮೈತ್ರಿಕೂಟದ ಎಲ್ಲಾ ಸದಸ್ಯರು ಸೇರಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಮತ್ತು ನಿರ್ಧಾರ ಏನೇ ಇರಲಿ, ನಾವು ಅದರಂತೆ ನಡೆದುಕೊಳ್ಳುತ್ತೇವೆ' ಎಂದು ಹೇಳಿದರು.
ಎಎಪಿಯು ಕೇಜ್ರಿವಾಲ್ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸುತ್ತದೆಯೇ ಎಂದು ಕೇಳಿದಾಗ, 'ಹೆಸರು ನೀಡುವ ಅಗತ್ಯವಿಲ್ಲ. ನಾವು ಈಗಾಗಲೇ ಅದರ ಭಾಗವಾಗಿದ್ದೇವೆ ಮತ್ತು ಅರವಿಂದ ಕೇಜ್ರಿವಾಲ್ ಕೂಡ ಆ ಮೈತ್ರಿಕೂಟದ ಭಾಗವಾಗಿದ್ದಾರೆ' ಎಂದರು.
ಕಳೆದ ವರ್ಷ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಎಎಪಿಯ ಹಿರಿಯ ನಾಯಕ ಮತ್ತು ಅಂದಿನ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಕೇಜ್ರಿವಾಲ್ ಅವರು ಪ್ರಧಾನಿಯಾಗಬೇಕೆಂದು ಒತ್ತಾಯಿಸಿದ್ದರು.
'ಏಕ್ ಮೌಕಾ ಕೇಜ್ರಿವಾಲ್ ಕೋ' (ಕೇಜ್ರಿವಾಲ್‌ಗೆ ಒಂದು ಅವಕಾಶ) ಎಂಬುದು ರಾಷ್ಟ್ರಮಟ್ಟದ ಚರ್ಚೆಯಾಗಿದೆ. ಜನರು 2024ರಲ್ಲಿ (ನರೇಂದ್ರ) ಮೋದಿಗೆ ಪರ್ಯಾಯವಾಗಿ ಕೇಜ್ರಿವಾಲ್ ಅವರನ್ನು ನೋಡುತ್ತಾರೆ. ಏಕೆಂದರೆ, ಅವರು ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಮಾತನಾಡುತ್ತಾರೆ ಎಂದು ಸಿಸೋಡಿಯಾ ಹೇಳಿದ್ದರು.