'ಇಂಡಿಯಾ' ಮೈತ್ರಿಕೂಟದ 3ನೇ ಸಭೆ; 2024ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ನಿರ್ಧಾರ ಸದ್ಯಕ್ಕಿಲ್ಲ!
ಗುರುವಾರ ಇಲ್ಲಿ ಆರಂಭವಾಗಲಿರುವ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯು ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ವಿವಾದಿತ ವಿಚಾರದ ಕುರಿತು ನಿರ್ಧಾರವನ್ನು ಆಯಾ ರಾಜ್ಯಗಳ ನಾಯಕರಿಗೆ ಬಿಟ್ಟುಕೊಡಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೋರಿಕೆ ಮೇರೆಗೆ ಈ ವಿಚಾರವನ್ನು ಸಭೆಯ ಕಾರ್ಯಸೂಚಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Published: 31st August 2023 09:34 AM | Last Updated: 31st August 2023 07:09 PM | A+A A-

ಪತ್ರಿಕಾಗೋಷ್ಠಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ಮತ್ತು ಶಿವಸೇನೆಯ ಆದಿತ್ಯ ಠಾಕ್ರೆ.
ಮುಂಬೈ: ಗುರುವಾರ ಇಲ್ಲಿ ಆರಂಭವಾಗಲಿರುವ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯು ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ವಿವಾದಿತ ವಿಚಾರದ ಕುರಿತು ನಿರ್ಧಾರವನ್ನು ಆಯಾ ರಾಜ್ಯಗಳ ನಾಯಕರಿಗೆ ಬಿಟ್ಟುಕೊಡಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೋರಿಕೆ ಮೇರೆಗೆ ಈ ವಿಚಾರವನ್ನು ಸಭೆಯ ಕಾರ್ಯಸೂಚಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೀಟು ಹಂಚಿಕೆಯ ಮಾತುಕತೆ ಆರಂಭವಾದ ಕ್ಷಣದಲ್ಲಿ ಅದು ನಮ್ಮ ನಮ್ಮಲ್ಲೇ ತಿಕ್ಕಾಟಕ್ಕೆ ಕಾರಣವಾಗುತ್ತದೆ. ಹೀಗಾಗಿ, ಲೋಕಸಭೆ ಚುನಾವಣೆಗೆ ಮುನ್ನ ಕೊನೆಯ ಕ್ಷಣದಲ್ಲಿ ಆ ವಿಚಾರವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಸಲಹೆ ನೀಡಿದ್ದಾರೆ.
ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಸೀಟು ಹಂಚಿಕೆ ಕುರಿತು ಮಿತ್ರಪಕ್ಷಗಳೊಂದಿಗೆ ಚರ್ಚಿಸಿದ ನಂತರ, ಆ ಕುರಿತು ಅಂತಿಮ ನಿರ್ಧಾರವನ್ನು ರಾಷ್ಟ್ರಮಟ್ಟದಲ್ಲಿ ಕೈಗೊಳ್ಳಬಹುದು ಎನ್ನಲಾಗಿದ್ದು, ಕಾಂಗ್ರೆಸ್ ಅದಕ್ಕೆ ಒಪ್ಪಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಪಕ್ಷಗಳ ಮೈತ್ರಿಕೂಟದ 3ನೇ ಸಭೆ: ಇಂಡಿಯಾ ಮೈತ್ರಿಕೂಟದಿಂದ ದೂರ ಉಳಿದ ಶಿರೋಮಣಿ ಅಕಾಲಿದಳ, ಬಿಎಸ್‌ಪಿ
ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಗುರಿಯನ್ನು ಇಂಡಿಯಾ ಮೈತ್ರಿಕೂಟ ಹೊಂದಿದೆ ಎಂದು ಮೂಲಗಳು ತಿಳಿಸಿವೆ. 'ಹಲವು ರಾಜ್ಯಗಳಲ್ಲಿ, ಬಿಜೆಪಿ ವಿರುದ್ಧ ಯಾರು ಮುನ್ನಡೆ ಸಾಧಿಸುತ್ತಾರೆ ಎಂಬುದು ಹೆಚ್ಚು ಕಡಿಮೆ ಸ್ಪಷ್ಟವಾಗಿದೆ. ಆದರೆ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಎಎಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್‌ನಂತಹ ಪಕ್ಷಗಳೊಂದಿಗೆ ಸೀಟು ಹಂಚಿಕೆ ಕುರಿತು ಒಮ್ಮತಕ್ಕೆ ಬರುವುದು ಸುಲಭವಲ್ಲ. ಗೆಲ್ಲುವ ಸಾಮರ್ಥ್ಯ ಮಾತ್ರ ಯಾವ ಪಕ್ಷಕ್ಕೆ ಎಷ್ಟು ಟಿಕೆಟ್ ಸಿಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ' ಎಂದು ಮೂಲಗಳು ತಿಳಿಸಿವೆ.
ನಾವು ಜನರಿಂದ ಹೆಚ್ಚಿನ ಬೆಂಬಲ ಪಡೆಯುತ್ತಿದ್ದು ಮೈತ್ರಿಯು ವೇಗವನ್ನು ಪಡೆಯುತ್ತಿದೆ. ಬಿಜೆಪಿ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡುವುದು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಮಿತ್ರಪಕ್ಷಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಇಂದಿರಾಗಾಂಧಿಯವರ ಆಡಳಿತದ ವಿರುದ್ಧ ಜನತಾ ಪಕ್ಷವನ್ನು ಹೇಗೆ ರಚಿಸಲಾಯಿತು ಎಂಬುದನ್ನು ಅವರು ನೆನಪಿಸಿಕೊಂಡರು.
ಇದನ್ನೂ ಓದಿ: INDIA ಮೈತ್ರಿಕೂಟಕ್ಕೆ ಇನ್ನೂ ಎರಡು ಪ್ರಾದೇಶಿಕ ಪಕ್ಷಗಳ ಸೇರ್ಪಡೆ
ಮೈತ್ರಿಕೂಟದ ಹಿಂದಿನ ಸಭೆ ಜುಲೈ 17ರಂದು ಬೆಂಗಳೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಡಲಾಗಿತ್ತು. ಮೈತ್ರಿಕೂಟದ ಮೊದಲ ಸಬೆ ಬಿಹಾರದ ಪಾಟ್ನಾದಲ್ಲಿ ನಡೆದಿತ್ತು. ಇದೀಗ ಒಟ್ಟು 28 ಪಕ್ಷಗಳು ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ.
ಕಾರ್ಯ ಹಂಚಿಕೆ
ಇಂಡಿಯಾ ಮೈತ್ರಿಕೂಟದ ಪ್ರತಿನಿಧಿಗಳಿಗಾಗಿ ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ 200ಕ್ಕೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಶಿವಸೇನೆ (ಯುಬಿಟಿ) ಮಾಧ್ಯಮದ ಉಸ್ತುವಾರಿ ಮತ್ತು ವಿಮಾನ ನಿಲ್ದಾಣದಲ್ಲಿ ಅತಿಥಿಗಳನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೆ, ಕಾಂಗ್ರೆಸ್ ಸಭೆಗೆ ವ್ಯವಸ್ಥೆ ಮಾಡುತ್ತದೆ. ಇದರೊಂದಿಗೆ ಎನ್‌ಸಿಪಿ (ಶರದ್ ಪವಾರ್) ಅವರ ಪ್ರತಿನಿಧಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಹೊಣೆ ಹೊತ್ತಿದೆ.