ನೋಯ್ಡಾ: ಸಿಲಿಂಡರ್ ಸ್ಫೋಟಗೊಂಡು 12 ದಿನದ ಹಸುಗೂಸು ಸೇರಿ ಇಬ್ಬರು ಮಕ್ಕಳು ಸಾವು, ನಾಲ್ವರಿಗೆ ಗಾಯ
ಭಾನುವಾರ ಮುಂಜಾನೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 12 ದಿನದ ಹೆಣ್ಣು ಮಗು ಸೇರಿದಂತೆ ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ ಮತ್ತು ಅವರ ಕುಟುಂಬದ ಇತರ ನಾಲ್ಕು ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 12th February 2023 11:13 AM | Last Updated: 12th February 2023 11:13 AM | A+A A-

ಸಾಂದರ್ಭಿಕ ಚಿತ್ರ
ನೋಯ್ಡಾ: ಭಾನುವಾರ ಮುಂಜಾನೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 12 ದಿನದ ಹೆಣ್ಣು ಮಗು ಸೇರಿದಂತೆ ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ ಮತ್ತು ಅವರ ಕುಟುಂಬದ ಇತರ ನಾಲ್ಕು ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ಮಾತನಾಡಿ, ಸೆಕ್ಟರ್ 8 ರ ಜೆಜೆ ಕ್ಲಸ್ಟರ್‌ನಲ್ಲಿರುವ ಮರದಿಂದ ನಿರ್ಮಿಸಲಾಗಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತಮ್ಮ ಇಲಾಖೆಗೆ ಮುಂಜಾನೆ 2.52 ಕ್ಕೆ ಮಾಹಿತಿ ಲಭಿಸಿತು ಎಂದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಎರಡು ಅಗ್ನಿಶಾಮಕ ವಾಹನಗಳು ನಾಲ್ಕು ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿವೆ. ಬೆಂಕಿಯಿಂದಾಗಿ ಕುಟುಂಬದ ಆರು ಸದಸ್ಯರಿಗೆ ಸುಟ್ಟ ಗಾಯಗಳಾಗಿವೆ. ಅವರಲ್ಲಿ 12 ವರ್ಷದ ಬಾಲಕ ಮತ್ತು ಕೇವಲ 12 ದಿನದ ಹೆಣ್ಣು ಮಗು ಮೃತಪಟ್ಟಿದೆ ಎಂದು ಚೌಬೆ ಹೇಳಿದ್ದಾರೆ.
20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ. ಪ್ರಾಥಮಿಕವಾಗಿ ಮನೆಯಲ್ಲಿ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಿಎಫ್‌ಒ ಹೇಳಿದರು.
ಗಾಯಗೊಂಡವರನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.