ಪ್ರಶ್ನೆ ಪತ್ರಿಕೆ ಸೋರಿಕೆ: ಗುಜರಾತ್ ಜೂನಿಯರ್ ಕ್ಲರ್ಕ್ ಪರೀಕ್ಷೆ ರದ್ದು; ಶಂಕಿತ ಆರೋಪಿ ಬಂಧನ

ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಜೂನಿಯರ್ ಕ್ಲರ್ಕ್‌ಗಳ ನೇಮಕಾತಿಗಾಗಿ ಗುಜರಾತ್ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆ ಭಾನುವಾರ ನಿಗದಿತ ಗಂಟೆಗಳ ಮೊದಲು ರದ್ದುಗೊಂಡಿದೆ ಮತ್ತು ಪೊಲೀಸರು ಈ ಸಂಬಂಧ ಶಂಕಿತನನ್ನು ಬಂಧಿಸಿದ್ದಾರೆ ಎಂದು ರಾಜ್ಯ ಪಂಚಾಯತ್ ಪರೀಕ್ಷಾ ಮಂಡಳಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಜೂನಿಯರ್ ಕ್ಲರ್ಕ್‌ಗಳ ನೇಮಕಾತಿಗಾಗಿ ಗುಜರಾತ್ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆ ಭಾನುವಾರ ನಿಗದಿತ ಗಂಟೆಗಳ ಮೊದಲು ರದ್ದುಗೊಂಡಿದೆ ಮತ್ತು ಪೊಲೀಸರು ಈ ಸಂಬಂಧ ಶಂಕಿತನನ್ನು ಬಂಧಿಸಿದ್ದಾರೆ ಎಂದು ರಾಜ್ಯ ಪಂಚಾಯತ್ ಪರೀಕ್ಷಾ ಮಂಡಳಿ ತಿಳಿಸಿದೆ.

ರಾಜ್ಯದಾದ್ಯಂತ 2,995 ಕೇಂದ್ರಗಳಲ್ಲಿ ನಡೆಯಬೇಕಿದ್ದ 1,181 ಹುದ್ದೆಗಳ ಪರೀಕ್ಷೆಗೆ 9.5 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ ಮತ್ತು ಭಾನುವಾರ ಬೆಳಗ್ಗೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿಯು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು "ಮುಂದೂಡಲು" ನಿರ್ಧರಿಸಿತು ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅದು ಹೇಳಿದೆ.

ಜೂನಿಯರ್ ಕ್ಲರ್ಕ್ (ಆಡಳಿತ/ಲೆಕ್ಕಪತ್ರ) ಪರೀಕ್ಷೆಯನ್ನು ಜನವರಿ 29 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ವಿವಿಧ ಜಿಲ್ಲೆಗಳಲ್ಲಿ ನಡೆಸಬೇಕಾಗಿತ್ತು. ಭಾನುವಾರ ಮುಂಜಾನೆ ಪೊಲೀಸರಿಗೆ ಬಂದ ಮಾಹಿತಿಯಂತೆ, ಅವರು ಶಂಕಿತನನ್ನು ವಶಕ್ಕೆ ತೆಗೆದುಕೊಂಡರು ಮತ್ತು ಆತನ ವಿಚಾರಣೆ ಬಳಿಕ ಪ್ರಶ್ನೆ ಪತ್ರಿಕೆ ಪ್ರತಿಯನ್ನು ವಶಪಡಿಸಿಕೊಂಡರು ಎಂದು ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳಿಗೆ ಆಗಿರುವ ಅನಾನುಕೂಲತೆಗೆ ಮಂಡಳಿ ವಿಷಾದ ವ್ಯಕ್ತಪಡಿಸಿದ್ದು, ಪರೀಕ್ಷಾ ಕೇಂದ್ರಗಳಿಗೆ ಹೋಗದಂತೆ ಸೂಚನೆ ನೀಡಿದೆ. ಪರೀಕ್ಷೆಯನ್ನು ಶೀಘ್ರವಾಗಿ ಹೊಸದಾಗಿ ನಡೆಸಲಾಗುವುದು, ಇದಕ್ಕಾಗಿ ಮಂಡಳಿಯು ಹೊಸ ಜಾಹೀರಾತನ್ನು ನೀಡುತ್ತದೆ ಎಂದು ಅದು ಹೇಳಿದೆ.

ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಮಾತನಾಡಿ, ಕಳೆದ 12 ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದುಗೊಳಿಸಲಾದ 15ನೇ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳುತ್ತಿದೆಯಾದರೂ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ. ರಾಜ್ಯದ ಯುವಜನರ ಭವಿಷ್ಯದ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಗುಜರಾತ್ ಆಮ್ ಆದ್ಮಿ ಪಕ್ಷದ (ಎಎಪಿ) ಅಧ್ಯಕ್ಷ ಇಸುದನ್ ಗಧ್ವಿ ಅವರು ಟ್ವಿಟರ್‌ನಲ್ಲಿ ಪೇಪರ್ ಸೋರಿಕೆ ವಿಷಯದ ಕುರಿತು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. 

ಗುಜರಾತ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಪ್ರಕರಣಗಳು ರಾಜ್ಯದಲ್ಲಿ ಯುವಜನರಿಂದ ವ್ಯಾಪಕ ಆಂದೋಲನಕ್ಕೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com