ಲೈಂಗಿಕ ಕಿರುಕುಳ: ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿಕೆ, ಮಾತುಕತೆಗೆ ಕೇಂದ್ರ ಮತ್ತೊಮ್ಮೆ ಆಹ್ವಾನ

ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಕುಸ್ತಿಪಟುಗಳು, ಪಟ್ಟು ಬಿಡದೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವಲ್ಲೇ ಕೇಂದ್ರ ಸರ್ಕಾರ ಕುಸ್ತಿಪಟುಗಳನ್ನು ಮತ್ತೊಮ್ಮೆ ಮಾತುಕತೆಗೆ ಆಹ್ವಾನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಕುಸ್ತಿಪಟುಗಳು, ಪಟ್ಟು ಬಿಡದೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವಲ್ಲೇ ಕೇಂದ್ರ ಸರ್ಕಾರ ಕುಸ್ತಿಪಟುಗಳನ್ನು ಮತ್ತೊಮ್ಮೆ ಮಾತುಕತೆಗೆ ಆಹ್ವಾನ ನೀಡಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಕುಸ್ತಿಪಟುಗಳೊಂದಿಗೆ ಅವರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.

ಕುಸ್ತಿಪಟುಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಈ ಕುರಿತು ಮಾತುಕತೆ ನಡೆಸಲು ಮತ್ತೊಮ್ಮೆ ಕುಸ್ತಿಪಟುಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಕುಸ್ತಿಪಟುಗಳು ಮತ್ತು ಅವರ ತರಬೇತುದಾರರು ಶನಿವಾರ (ಜೂನ್ 3) ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ್ದಾರೆ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ಪೂನಿಯಾ ಹೇಳಿದ್ದರು.

ಅಮಿತ್ ಶಾ ಅವರು ಮಾತುಕಟೆ ನಡೆಸಿದ ಬೆನ್ನಲ್ಲೇ ಸೋಮವಾರ (ಜೂನ್ 5) ಕುಸ್ತಿಪಟುಗಳು ರೈಲ್ವೆಯಲ್ಲಿ ತಮ್ಮ ಕೆಲಸಕ್ಕೆ ಮರಳಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು.

ಈ ಸುದ್ದಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಕುಸ್ತಿಪಟು ಬಜರಂಗ್ ಪುನಿಯಾ ಅವರು, ನಮ್ಮ ಜೀವನ ಅಪಾಯದಲ್ಲಿದೆ, ಅದರ ಮುಂದೆ ಕೆಲಸವು ತುಂಬಾ ಚಿಕ್ಕದಾಗಿದೆ. ಕೆಲಸವು ನ್ಯಾಯದ ಹಾದಿಯಲ್ಲಿ ಅಡಚಣೆಯಾಗುತ್ತೆ ಎಂದಾದರೆ ಅದನ್ನು ಬಿಡಲು ನಾವು ಹತ್ತು ಸೆಕೆಂಡುಗಳು ಸಹ ತೆಗೆದುಕೊಳ್ಳುವುದಿಲ್ಲ ಎಂಜು ಕುಸ್ತಿಪಟುಗಳು ಹೇಳಿದ್ದರು.

ಮತ್ತೊಂದು ಟ್ವೀಟ್‌ನಲ್ಲಿ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ, ನ್ಯಾಯ ಸಿಗುವವರೆಗೆ ಹೋರಾಟ (ಚಳವಳಿ) ಮುಂದುವರಿಯುತ್ತದೆ ಎಂದು ತಿಳಿಸಿದ್ದರು.

ಈ ವರ್ಷದ ಜನವರಿ 18 ರಂದು, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಸುಮಾರು 30 ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಧರಣಿ ಕುಳಿತರು, ಲೈಂಗಿಕ ಕಿರುಕುಳದ ಆರೋಪದಡಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜನವರಿ 19 ರಂದು ಕುಸ್ತಿಪಟುಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ತಡವಾಗಿ ಮಾತುಕತೆ ನಡೆಸಿದರು. ನಂತರ ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ರವಿ ದಹಿಯಾ ಕ್ರೀಡಾ ಸಚಿವರನ್ನು ಭೇಟಿಯಾದರು. ಈ ವಿಚಾರದಲ್ಲಿ ಸರ್ಕಾರ ಕುಸ್ತಿಪಟುಗಳಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.

ಇದರ ನಂತರ, ಏಪ್ರಿಲ್ 23 ರಂದು, ಕುಸ್ತಿಪಟುಗಳು ಮತ್ತೆ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತರು. ಏಪ್ರಿಲ್ 24 ರಂದು, ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​45 ದಿನಗಳಲ್ಲಿ ಕುಸ್ತಿ ಫೆಡರೇಶನ್‌ನ ಕಾರ್ಯಕಾರಿ ಸಮಿತಿಗೆ ಚುನಾವಣೆಗಳನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು (ತಾತ್ಕಾಲಿಕ ಸಮಿತಿ) ರಚಿಸುತ್ತದೆ ಎಂದು ಹೇಳಿತ್ತು.

ಮೇ 13 ರಂದು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​​​ಭಾರತದ ಕುಸ್ತಿ ಫೆಡರೇಶನ್‌ನ ಎಲ್ಲಾ ಅಧಿಕಾರಿಗಳನ್ನು ಈ ಸಂಸ್ಥೆಯ ಚಾಲನೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಕೆಲಸ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸಂಪೂರ್ಣವಾಗಿ ನಿರ್ಬಂಧಿಸಿದೆ ಎಂದು ಸುದ್ದಿಗಳು ಪ್ರಕಟಗೊಂಡಿದ್ದವು.

ಇದಾದ ಬಳಿಕ ಮೇ 7ರಂದು ಕುಸ್ತಿ ಫೆಡರೇಷನ್‌ನ ಚುನಾವಣೆ ನಡೆಯಬೇಕಿದ್ದು, ಕ್ರೀಡಾ ಸಚಿವಾಲಯ ರದ್ದುಗೊಳಿಸಿತ್ತು. ಭಾರತದ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಕುಸ್ತಿಪಟುಗಳು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

ಇದರಂತೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೇ 28 ರಂದು, ಕುಸ್ತಿಪಟುಗಳು ಹೊಸ ಸಂಸತ್ತಿನ ಬಳಿ ಮಹಿಳಾ ಮಹಾಪಂಚಾಯತ್ ನಡೆಸಲು ಪ್ರಯತ್ನಿಸಿದರು, ಈ ಕಾರಣದಿಂದಾಗಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಜಂತರ್ ಮಂತರ್‌ನಿಂದ ಅವರ ವಸ್ತುಗಳನ್ನು ತೆಗೆದುಹಾಕಿದರು.

ಇದಾದ ನಂತರ ಕುಸ್ತಿಪಟುಗಳು ತಮ್ಮ ಪದಕಗಳನ್ನು ಹರಿದ್ವಾರದ ಗಂಗಾ ನದಿಯಲ್ಲಿ ಎಸೆಯಲು ಯತ್ನಿಸಿದರು. ಆದರೆ, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟೀಕಾಯತ್ ಮತ್ತು ಇತರ ಬೆಂಬಲಿಗರ ಕರೆ ಮೇರೆಗೆ ರೈತರು ತಮ್ಮ ಪದಕಗಳನ್ನು ನೀರಿಗೆ ಹಾಕಲು ಬಿಡಲಿಲ್ಲ, ಕುಸ್ತಿಪಟುಗಳಿಗೆ ಬೆಂಬಲವಾಗಿ, ರೈತರು ಯುಪಿಯ ಮುಜಾಫರ್‌ನಗರದಲ್ಲಿ ಮತ್ತು ಜೂನ್ 2 ರಂದು ಹರಿಯಾಣದ ಕುರುಕ್ಷೇತ್ರದಲ್ಲಿ ಖಾಪ್ ಮಹಾಪಂಚಾಯತ್ ಅನ್ನು ಆಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com