ಭುವನೇಶ್ವರ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟ ಹಲವರ ಗುರುತು ಪತ್ತೆಹಚ್ಚುವುದು ಇದೀಗ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಒಂದೇ ಮೃತದೇಹಕ್ಕೆ ಹಲವಾರು ಜನರು ಹಕ್ಕು ಸಾಧಿಸುತ್ತಿದ್ದು, ಒಡಿಶಾ ಸರ್ಕಾರವು ಮೃತರ ಗುರುತಿಗಾಗಿ ಡಿಎನ್‌ಎ ಪರೀಕ್ಷೆಗಾಗಿ 33 ಮಾದರಿಗಳನ್ನು ದೆಹಲಿಯ ಏಮ್ಸ್‌ಗೆ ಕಳುಹಿಸಿದೆ.
ಕೆಲವು ದೇಹಗಳನ್ನು ಪಡೆಯಲು ಯಾರೂ ಇಲ್ಲದಿದ್ದರೂ, ಅನೇಕ ಕುಟುಂಬಗಳು ಒಂದು ಮೃತಹೇಹಕ್ಕೆ ಹಕ್ಕು ಸಾಧಿಸಿವೆ. ಮೃತದೇಹಗಳು ತೀರಾ ಹದಗೆಟ್ಟಿರುವುದರಿಂದ ಅವರ ಗುರುತು ಪತ್ತೆಹಚ್ಚುವಲ್ಲಿ ಕುಟುಂಬಸ್ಥರು ಕೂಡ ತೊಂದರೆ ಎದುರಿಸುತ್ತಿದ್ದಾರೆ ಎಂದು ಭುವನೇಶ್ವರ್ ಮೇಯರ್ ಸುಲೋಚನಾ ದಾಸ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸುಲೋಚನಾ, ಸಂಬಂಧಿಕರು ತಮ್ಮ ಪ್ರೀತಿಪಾತ್ರರ ದೇಹವನ್ನು ಯಾವುದೇ ತೊಂದರೆಯಿಲ್ಲದೆ ಪಡೆಯಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. 33 ದೇಹಗಳ ಮಾದರಿಗಳನ್ನು ಮತ್ತು ಅವರ ಹಕ್ಕುದಾರರನ್ನು ಡಿಎನ್‌ಎ ಪರೀಕ್ಷೆಗಾಗಿ ದೆಹಲಿಯ ಏಮ್ಸ್‌ಗೆ ಕಳುಹಿಸಲಾಗಿದೆ. ವರದಿ ಲಭ್ಯವಾದ ನಂತರ, ಮೃತದೇಹಗಳನ್ನು ನಿಜವಾದ ಹಕ್ಕುದಾರರಿಗೆ ಹಸ್ತಾಂತರಿಸಲಾಗುವುದು ಎಂದರು.
ಇತರ ಆಸ್ಪತ್ರೆಗಳ ಶವಾಗಾರಗಳಲ್ಲಿ ಇಡಲಾಗಿದ್ದ 39 ಶವಗಳನ್ನು ನಿನ್ನೆ ರಾತ್ರಿ ಏಮ್ಸ್ ಭುವನೇಶ್ವರಕ್ಕೆ ತರಲಾಗಿದೆ ಮತ್ತು ಈಗ ಎಲ್ಲಾ 88 ಮೃತದೇಹಗಳ ಗುರುತು ಪತ್ತೆಹಚ್ಚಲು ಬಿಡಲಾಗಿದ್ದು, ನಾಲ್ಕು ದೊಡ್ಡ ಕಂಟೈನರ್‌ಗಳಲ್ಲಿ ಸಂರಕ್ಷಿಸಲಾಗಿದೆ ಎಂದು ಮೇಯರ್ ಹೇಳಿದರು.
ಎರಡು ದಿನಗಳ ಹಿಂದೆ ತನ್ನ ಮಗನ ಶವವನ್ನು ಬಿಹಾರದ ಯಾರಿಗೋ ಹಸ್ತಾಂತರಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಜೂನ್ 2ರಂದು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ತಮ್ಮ ಪ್ರೀತಿಪಾತ್ರರನ್ನು ಪತ್ತೆಹಚ್ಚಲು ಇನ್ನೂ ಅನೇಕರಿಗೆ ಸಾಧ್ಯವಾಗಲಿಲ್ಲ.
ರಾಜ್ಯ ಸರ್ಕಾರವು ಏಮ್ಸ್ ಮತ್ತು ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿರುವ ಇತರ ಕೆಲವು ಆಸ್ಪತ್ರೆಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ. ಅಧಿಕಾರಿಗಳು ಸಂತ್ರಸ್ತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದಾರೆ ಎಂದು ಒಡಿಶಾ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಿಮ ಸಂಸ್ಕಾರ ನೆರವೇರಿಸುವ ಸ್ಥಳದವರೆಗೆ ಮೃತದೇಹಗಳನ್ನು ಉಚಿತವಾಗಿ ಸಾಗಿಸುವ ವ್ಯವಸ್ಥೆಗಳನ್ನು ಒಡಿಶಾ ಸರ್ಕಾರ ಮಾಡಿದೆ ಎಂದು ಅವರು ಹೇಳಿದರು.
ಈಮಧ್ಯೆ, ಜೂನ್ 2 ರಂದು ಸಂಜೆ ರೈಲು ದುರಂತ ಸಂಭವಿಸಿದ ಹಳಿಗಳಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ. ಒಟ್ಟು 56 ರೈಲುಗಳು ಈ ನಿಲ್ದಾಣದ ಮೂಲಕ ಎರಡೂ ಕಡೆಗೆ ಚಲಿಸಿವೆ ಎಂದು ಆಗ್ನೇಯ ರೈಲ್ವೆಯ ಸಿಪಿಆರ್‌ಒ ಆದಿತ್ಯ ಕುಮಾರ್ ಚೌಧರಿ ಹೇಳಿದ್ದಾರೆ.
Advertisement