ಬಾಲಸೋರ್ ರೈಲು ಅಪಘಾತದ ಬೆನ್ನಲ್ಲೇ ಜೈಪುರದಲ್ಲಿ ಮತ್ತೊಂದು ದುರಂತ: ಗೂಡ್ಸ್ ರೈಲಿಗೆ ಸಿಲುಕಿ 6 ಕಾರ್ಮಿಕರ ದುರ್ಮರಣ
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದ ಬೆನ್ನಲ್ಲೇ ಅದೇ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಗೂಡ್ಸ್ ರೈಲಿಗೆ ಸಿಲುಕಿ 6 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
Published: 08th June 2023 10:37 AM | Last Updated: 08th June 2023 06:48 PM | A+A A-

ಸಂಗ್ರಹ ಚಿತ್ರ
ಜಾಜ್‌ಪುರ (ಒಡಿಶಾ): ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದ ಬೆನ್ನಲ್ಲೇ ಅದೇ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಗೂಡ್ಸ್ ರೈಲಿಗೆ ಸಿಲುಕಿ 6 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಒಡಿಶಾದ ಜಾಜ್'ಪುರ ರೈಲು ನಿಲ್ದಾಣದಲ್ಲಿ ಮನಕಲುಕುವ ದುರ್ಘಟನೆ ಬುಧವಾ ನಡೆದಿದೆ. ಘಟನೆಯಲ್ಲಿ ಮೂರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಲ್ದಾಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗುಡುಗು ಸಹಿತ ಭಾರೀ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ಅಲ್ಲೇ ನಿಂತಿದ್ದ ಗೂಡ್ಸ್ ರೈಲಿನ ಅಡಿಯಲ್ಲಿ ಕಾರ್ಮಿಕರು ಆಶ್ರಯ ಪಡೆದುಕೊಂಡಿದ್ದಾರೆ.
ಈ ವೇಳೆ ದಿಢೀರನೆ ರೈಲು ಚಲಿಸಲಾರಂಭಿಸಿದ್ದು, ಅದರಡಿಯಲ್ಲಿ ಸಿಲುಕಿ 6 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತ್ರಿವಳಿ ರೈಲು ಅಪಘಾತ: ಮೃತರ ಸಂಖ್ಯೆ 288ಕ್ಕೆ ಏರಿಕೆ, ಒಡಿಶಾ ಸರಕಾರದ ಪರಿಷ್ಕೃತ ಮಾಹಿತಿ
ದಿಢೀರ್ ಗುಡುಗು ಸಹಿತ ಮಳೆಯಾಯಿತು. ಗೂಡ್ಸ್ ರೈಲು ನಿಂತಿದ್ದ ರೈಲ್ವೇ ಸೈಡಿಂಗ್‌ನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಳೆ ಹಿನ್ನೆಲೆಯಲ್ಲಿ ಕಾರ್ಮಿಕರು ರೈಲಿನ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಆದರೆ, ದುರದೃಷ್ಟವಶಾತ್, ಎಂಜಿನ್ ಅನ್ನು ಜೋಡಿಸದ ಗೂಡ್ಸ್ ರೈಲು ಚಲಿಸಲು ಪ್ರಾರಂಭಿಸಿತು, ಇದೇ ಅಪಘಾತಕ್ಕೆ ಕಾರಣವಾಯಿತು ಎಂದು ರೈಲ್ವೇ ವಕ್ತಾರರು ಮಾಹಿತಿ ನೀಡಿದ್ದಾರೆ.
ಘಟನೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಗಾಯಗೊಂಡಿರುವ ಕಾರ್ಮಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.