ಕೋಲ್ಕತಾ: ಪಾಟ್ನಾದಲ್ಲಿ ನಡೆದ ಬೃಹತ್ ವಿರೋಧ ಪಕ್ಷದ ಸಭೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ಸ್ಟ್ (ಸಿಪಿಐಎಂ) ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಮಹಾ ವಿರೋಧ ಪಕ್ಷದ ಮೈತ್ರಿಯನ್ನು ರಚಿಸುವ ಪ್ರಯತ್ನಗಳ ಹೊರತಾಗಿಯೂ ಕಾಂಗ್ರೆಸ್ ಮತ್ತು ಸಿಪಿಐಎಂನ ಕ್ರಮಗಳು ಪಶ್ಚಿಮಬಂಗಾಳದಲ್ಲಿ ಸ್ಥಾನ ತರಿಸುತ್ತಿರುವಂತಿದೆ ಎಂದು ಹೇಳಿದ್ದಾರೆ.
"ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ (ಮಹಾಜೋತ್) ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ-ಎಂ ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ ಸಂಬಂಧವನ್ನು ಮುರಿಯುತ್ತೇನೆ" ಎಂದು ಟಿಎಂಸಿ ಮುಖ್ಯಸ್ಥರು ಹೇಳಿದ್ದಾರೆ. ಸೋಮವಾರ ಕೂಚ್ ಬಿಹಾರ್‌ನಲ್ಲಿ ಪಂಚಾಯತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಈ ಮಾತು ಹೇಳಿದ್ದು, ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಬಾರಿಗೆ ಕಾಂಗ್ರೆಸ್ ಮತ್ತು ಸಿಪಿಎಂ ಬಿಜೆಪಿಯೊಂದಿಗೆ ಪರಸ್ಪರ ಒಪ್ಪಂದ ಹೊಂದಿದೆ ಎಂದು ಬ್ಯಾನರ್ಜಿ ಟೀಕಿಸಿದ್ದಾರೆ.
ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, 'ಬಿಜೆಪಿ ವಿರುದ್ಧದ ಹೋರಾಟದಲ್ಲಿ ಟಿಎಂಸಿಯ ವಿಶ್ವಾಸಾರ್ಹತೆ ಯಾವಾಗಲೂ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ' ಎಂದು ಹೇಳಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇಷ್ಟು ವರ್ಷಗಳಲ್ಲಿ ಟಿಎಂಸಿ ವಹಿಸಿದ ಪಾತ್ರ ನಮಗೆಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಸಿಎಂಐಎಂ ಕೂಡ ಇಂತಹುದೇ ರೀತಿಯ ಹೇಳಿಕೆ ನೀಡಿದ್ದು, 'ಬಿಜೆಪಿ ವಿರುದ್ಧ ಹೋರಾಡುವ ಮಾರ್ಗಗಳ ಕುರಿತು ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ಗೆ ಉಪನ್ಯಾಸ ನೀಡುವ ಕೊನೆಯ ವ್ಯಕ್ತಿ ಬ್ಯಾನರ್ಜಿಯಾಗಬೇಕು ಎಂದು ಹೇಳಿದೆ.
"ಸಿಪಿಐ-ಎಂ, ಕಾಂಗ್ರೆಸ್ ಮತ್ತು ಟಿಎಂಸಿ ಒಂದೇ ದೋಣಿಯಲ್ಲಿವೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ" ಎಂದು ಬಿಜೆಪಿ ನಾಯಕ ರಾಹುಲ್ ಸಿನ್ಹಾ ಹೇಳಿದ್ದಾರೆ.
ಏತನ್ಮಧ್ಯೆ ದೆಹಲಿ ಸುಗ್ರೀವಾಜ್ಞೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಆಮ್ ಆದ್ಮಿ ಪಕ್ಷ ಅಂತಹ ಯಾವುದೇ ಪಕ್ಷದ ಭಾಗವಾಗುವುದು ಕಷ್ಟ ಎಂದು ಪ್ರತಿಪಾದಿಸುತ್ತಿರುವಾಗಲೇ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಮತ್ತೊಂದು ಬಿರುಕು ಮೂಡಿದಂತೆ ಕಾಣುತ್ತಿದೆ. ಇತ್ತೀಚಿಗೆ ವಿಪಕ್ಷಗಳ ನಿರ್ಣಾಯಕ ಸಭೆಯಲ್ಲಿ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ವಿರೋಧ ಪಕ್ಷಗಳು ನಿರ್ಧರಿಸಿದ್ದವು. ಆದರೆ ದೆಹಲಿ ಸುಗ್ರೀವಾಜ್ಞೆ ವಿಷಯಗಳಲ್ಲಿ ಕಾಂಗ್ರೆಸ್ ಸಾರ್ವಜನಿಕವಾಗಿ ಬೆಂಬಲಿಸುವವರೆಗೆ ಮೈತ್ರಿಯಲ್ಲಿ ಸೇರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹತ್ತಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಬ್ಯಾನರ್ಜಿ ಸೇರಿದಂತೆ 32 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು.
Advertisement