ಜೀವ ಬೆದರಿಕೆ ಆರೋಪ: ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಎಫ್‍ಐಆರ್ ದಾಖಲು
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತ ಸಹಾಯಕ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಗ್ ಬಾಸ್ ಸ್ಪರ್ಧಿ ಅರ್ಚನಾ ಗೌತಮ್ ಆರೋಪಿಸಿದ ಹಿನ್ನಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.
Published: 08th March 2023 12:14 PM | Last Updated: 08th March 2023 04:13 PM | A+A A-

ಯಾಂಕಾ ಗಾಂಧಿ ಪಿಎ ವಿರುದ್ಧ ಎಫ್‍ಐಆರ್ ದಾಖಲು
ಮೀರತ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತ ಸಹಾಯಕ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಗ್ ಬಾಸ್ ಸ್ಪರ್ಧಿ ಅರ್ಚನಾ ಗೌತಮ್ ಆರೋಪಿಸಿದ ಹಿನ್ನಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಬಿಗ್ ಬಾಸ್ 16ನೇ ಸೀಸನಿನ ಟಾಪ್ 5 ಫೈನಲಿಸ್ಟ್ ರಲ್ಲಿ ಒಬ್ಬರಾಗಿದ್ದ ಅರ್ಚನಾ ಗೌತಮ್ ಅವರು ಈ ಗಂಭೀರ ಆರೋಪ ಮಾಡಿದ್ದು, ಈ ಕುರಿತಂತೆ ಮೀರತ್‍ನ ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೇಸ್‍ಬುಕ್ ಲೈವ್‍ನಲ್ಲಿ ಘಟನೆಯ ಬಗ್ಗೆ ವಿವರವಾಗಿ ಮಾತನಾಡಿರುವ ಅವರು ಪ್ರಿಯಾಂಕಾ ಅವರ ಆಪ್ತ ಸಹಾಯಕ ಸಂದೀಪ್ ಸಿಂಗ್ ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಪ್ರಿಯಾಂಕಾ ಗಾಂಧಿಯವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಫೆಬ್ರವರಿ 26 ರಂದು ಛತ್ತೀಸ್‍ಗಢದ ರಾಯ್‍ಪುರಕ್ಕೆ ತಮ್ಮ ಪುತ್ರಿ ಅರ್ಚನಾ ತೆರಳಿದ್ದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಅವರ ಆಪ್ತ ಸಹಾಯಕರನ್ನು ಕೇಳಿಕೊಂಡಿದ್ದರು. ಆದರೆ, ಆಕೆಯನ್ನು ಪ್ರಿಯಾಂಕಾ ಗಾಂಧಿಗೆ ಪರಿಚಯಿಸಲು ನಿರಾಕರಿಸಿದ್ದ ಆತ, ಜಾತಿವಾದಿ ಪದಗಳು ಹಾಗೂ ಅವಾಚ್ಯ ಶಬ್ಧಗಳನ್ನು ಬಳಸಿ ಅರ್ಚನಾ ಜತೆ ಅಸಭ್ಯವಾಗಿ ಮಾತನಾಡಿದ್ದಾನೆ.ಇದಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಆರ್ಚನಾ ತಂದೆ ಗೌತಮ್ ಬುದ್ಧ ತಿಳಿಸಿದ್ದಾರೆ.
ಇದನ್ನೂ ಓದಿ: ತಾಳ್ಮೆ ಮೀರುತ್ತಿದೆ, ಕಿರುಕುಳದಿಂದ ಯಾವುದೇ ಸಮಸ್ಯೆಯಾದರೆ...: ಕೇಂದ್ರಕ್ಕೆ ಲಾಲು ಪುತ್ರಿ ರೋಹಿಣಿ ಆಚಾರ್ಯ ಎಚ್ಚರಿಕೆ
ಅರ್ಚನಾ ಅವರ ತಂದೆ ಗೌತಮ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೀರತ್ ಎಸ್ಪಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ. ಬಿಗ್ ಬಾಸ್ ಮಾಜಿ ಸ್ರ್ಪಧಿ ಮತ್ತು ಕಾಂಗ್ರೆಸ್ ನಾಯಕಿ ಅರ್ಚನಾ ಗೌತಮ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪಿಎ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.