ವಿಮಾನದಲ್ಲಿ ಅಶಿಸ್ತಿನ ವರ್ತನೆ ಪ್ರಕರಣ: 25 ಸಾವಿರ ರು. ದಂಡ ಕಟ್ಟಲು ನಿರಾಕರಿಸಿದ ಏರ್ ಇಂಡಿಯಾ ಪ್ರಯಾಣಿಕ ಜೈಲು ಪಾಲು!
ಏರ್ ಇಂಡಿಯಾ ವಿಮಾನದಲ್ಲಿ ಅಶಿಸ್ತಿನ ವರ್ತನೆ ಮತ್ತು ಧೂಮಪಾನದ ಆರೋಪದ ಮೇಲೆ ದಂಡ ಕಟ್ಟಲು ನಿರಾಕರಿಸಿದ ಆರೋಪಿಯನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿದೆ.
Published: 14th March 2023 02:15 PM | Last Updated: 14th March 2023 08:02 PM | A+A A-

ಸಾಂದರ್ಭಿಕ ಚಿತ್ರ
ದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಅಶಿಸ್ತಿನ ವರ್ತನೆ ಮತ್ತು ಧೂಮಪಾನದ ಆರೋಪದ ಮೇಲೆ ದಂಡ ಕಟ್ಟಲು ನಿರಾಕರಿಸಿದ ಆರೋಪಿಯನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿದೆ. ಅವರು ಜಾಮೀನಿಗಾಗಿ 25,000 ರೂಪಾಯಿಗಳನ್ನು ಪಾವತಿಸಲು ನಿರಾಕರಿಸಿದ ಆತ ಕೇವಲ 250 ರೂ. ದಂಡ ಪಾವತಿ ಮಾಡುವುದಾಗಿ ವಾದಿಸಿದ್ದ.
ಲಂಡನ್ನಿಂದ ಮುಂಬಯಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ, ಗಲಾಟೆ ಸೃಷ್ಟಿಸಿದ್ದ ಪ್ರಯಾಣಿಕನಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಯಾಣಿಕನ ಹೆಸರು ರತ್ನಾಕರ್ ದ್ವಿವೇದಿ ಎಂದಾಗಿದ್ದು, 37ವರ್ಷ.
ಮಾರ್ಚ್ 10ರಂದು ಲಂಡನ್ನಿಂದ ಮುಂಬಯಿಗೆ ಆಗಮಿಸುತ್ತಿದ್ದಾಗ ವಿಮಾನದ ಶೌಚಗೃಹಕ್ಕೆ ಹೋಗಿ ಸಿಗರೇಟ್ ಸೇದಿದ್ದ. ಅದನ್ನು ನೋಡಿ ತಡೆಯಲು ಹೋದ ವಿಮಾನ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದ. ಆಗ ಸಿಬ್ಬಂದಿ ಆತನ ಕೈಕಾಲು ಕಟ್ಟಿ ಕೂರಿಸಿ, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮುಂಬಯಿ ಪೊಲೀಸರಿಗೆ ಒಪ್ಪಿಸಿದ್ದರು.
ಪೊಲೀಸರು ರತ್ನಾಕರ್ನನ್ನು ಅಂಧೇರಿ ಮೆಟ್ರೋಪಾಲಿಟಿನ್ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್ ಆತನಿಗೆ 25 ಸಾವಿರ ರೂಪಾಯಿ ನಗದು ಆಧಾರಿತ ಜಾಮೀನು ನೀಡಿತ್ತು. ಆದರೆ ರತ್ನಾಕರ್ ಅಷ್ಟು ಹಣವನ್ನು ಪಾವತಿ ಮಾಡಲು ಒಪ್ಪಲಿಲ್ಲ.
ಇದನ್ನೂ ಓದಿ: ಪ್ರಯಾಣಿಕರಿಗೆ ಉತ್ತರ ಭಾಗದ ಅಮೋಘ ಬೆಳಕಿನ ದರ್ಶನ ಮಾಡಿಸಲು ವಿಮಾನವನ್ನು 360 ಡಿಗ್ರಿ ತಿರುಗಿಸಿದ ಪೈಲಟ್!
ಅದರ ಬದಲಿಗೆ, ‘ನಾನು ಆನ್ಲೈನ್ನಲ್ಲಿ ಹುಡುಕಿದ್ದೇನೆ. ನನ್ನ ವಿರುದ್ಧ ದಾಖಲಾದ ಐಪಿಸಿ ಸೆಕ್ಷನ್ 330ರಡಿಯಲ್ಲಿ (ಇತರರ ಜೀವ ಮತ್ತು ಖಾಸಗಿ ಸುರಕ್ಷತೆಗೆ ಅಪಾಯವೊಡ್ಡಿದ ಆರೋಪ) ಜಾಮೀನು ಪಡೆಯುವ ದಂಡ ಕೇವಲ 250 ರೂಪಾಯಿ. ನಾನು ಅಷ್ಟನ್ನು ಮಾತ್ರ ಪಾವತಿ ಮಾಡುತ್ತೇನೆ’ ಎಂದು ವಾದಿಸಿದ್ದ. ಹೀಗಾಗಿ ಕೋರ್ಟ್ ಆತನನ್ನು ಜೈಲಿಗೆ ಕಳಿಸಿದೆ.
ಆರೋಪಿ ವಿಮಾನದಲ್ಲಿ ಗೊಂದಲವನ್ನುಂಟು ಮಾಡಿದರು ಮತ್ತು ಎಲ್ಲಾ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದರು, ಜೊತೆಗೆ ಪೈಲಟ್‌ನ ಮೌಖಿಕ ಮತ್ತು ಲಿಖಿತ ಸೂಚನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.