ತಮಿಳುನಾಡು: ಹಿಜಾಬ್ ತೆಗೆಯುವಂತೆ ಮಹಿಳೆಗೆ ಒತ್ತಾಯ, ಆರು ಮಂದಿ ಬಂಧನ
ಈ ವಾರದ ಆರಂಭದಲ್ಲಿ ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡುತ್ತಿದ್ದ ಮಹಿಳೆಯೊಬ್ಬಳ ಹಿಜಾಬ್ ತೆಗೆಯುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿದ ಆರು ಮಂದಿಯನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
Published: 30th March 2023 07:47 PM | Last Updated: 30th March 2023 07:47 PM | A+A A-

ಸಾಂದರ್ಭಿಕ ಚಿತ್ರ
ವೆಲ್ಲೂರು: ಈ ವಾರದ ಆರಂಭದಲ್ಲಿ ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡುತ್ತಿದ್ದ ಮಹಿಳೆಯೊಬ್ಬಳ ಹಿಜಾಬ್ ತೆಗೆಯುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿದ ಆರು ಮಂದಿಯನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಬಲವಂತವಾಗಿ ಹಿಜಾಬ್ ತೆಗೆಯುವಂತೆ ಮಹಿಳೆಯನ್ನು ಒತ್ತಾಯಿಸಿದ ಗ್ಯಾಂಗ್ ನಲ್ಲಿ 17 ವರ್ಷದ ಬಾಲ ಅಪರಾಧಿಯೊಬ್ಬ ಸೇರಿದ್ದು, ಆತನನ್ನು ಸರ್ಕಾರಿ ರಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ. ಉಳಿದವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಬಹುತೇಕ ಆಟೋ ರಿಕ್ಷಾ ಚಾಲಕರಾಗಿದ್ದು, ಕೋಟೆಗೆ ಭೇಟಿ ನೀಡುತ್ತಿದ್ದ ಮೂವರು ಹಿಜಾಬ್ ಧರಿಸದ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ವೆಲ್ಲೂರ್ ಪೊಲೀಸ್ ವರಿಷ್ಠಾಧಿಕಾರಿ ಎಸ್ ರಾಜೇಶ್ ಕಣ್ಣನ್, ಮಾರ್ಚ್ 27 ರಂದು ನಡೆದ ಅಪರಾಧದ ಹಿಂದಿನ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ವಿಡಿಯೋಗಳನ್ನು ಶೇರ್ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದರು.
ಹಿಜಾಬ್ ಧರಿಸಿದ ಮಹಿಳೆಯನ್ನು ಹೊರಗೆ ಕರೆದೊಯ್ಯುವುದು ನ್ಯಾಯವೇ ಎಂದು ಮಹಿಳೆಯ ಸ್ನೇಹಿತೆಯನ್ನು ದುಷ್ಕರ್ಮಿಗಳು ಕೇಳುತ್ತಿರುವುದು ವಿಡಿಯೋದಲ್ಲಿದೆ. ಈ ಘಟನೆಯ ನಂತರ 16ನೇ ಶತಮಾನದ ಐತಿಹಾಸಿಕ ಕೋಟೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸ್ ನೆರವಿನ ಬೂತ್ ನ್ನು ಶಾಶ್ವತಗೊಳಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಬೂತ್‌ನಲ್ಲಿ ಪೊಲೀಸ್ ಅಧಿಕಾರಿಗಳ ಫೋನ್ ಸಂಖ್ಯೆಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಎಂದು ಕಣ್ಣನ್ ಸುದ್ದಿಗಾರರಿಗೆ ತಿಳಿಸಿದರು.