ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ; ಬಾಲಕಿಯ ದೇಹವನ್ನು ಅರ್ಧ ಕಿ.ಮೀ. ಎಳೆದೊಯ್ದ ಬಸ್

ಒಡಿಶಾದ ಬಲಂಗೀರ್ ಜಿಲ್ಲೆಯ ಗೈಂತಾಲಾ ಬಳಿ ವೇಗವಾಗಿ ಬಂದ ಖಾಸಗಿ ಬಸ್ ಬಾಲಕಿ ತನ್ನ ತಂದೆ ಮತ್ತು ಸಹೋದರಿಯೊಂದಿಗೆ ಸವಾರಿ ಮಾಡುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಆಕೆಯ ದೇಹವನ್ನು ಸುಮಾರು ಅರ್ಧ ಕಿ.ಮೀ ದೂರದವರೆಗೆ ಎಳೆದುಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೊಚ್ಚಿಗೆದ್ದ ಸ್ಥಳೀಯರಿಂದ ಪ್ರತಿಭಟನೆ, ರಸ್ತೆ ತಡೆ
ರೊಚ್ಚಿಗೆದ್ದ ಸ್ಥಳೀಯರಿಂದ ಪ್ರತಿಭಟನೆ, ರಸ್ತೆ ತಡೆ

ಭುವನೇಶ್ವರ: ಒಡಿಶಾದ ಬಲಂಗೀರ್ ಜಿಲ್ಲೆಯ ಗೈಂತಾಲಾ ಬಳಿ ವೇಗವಾಗಿ ಬಂದ ಖಾಸಗಿ ಬಸ್ ಬಾಲಕಿ ತನ್ನ ತಂದೆ ಮತ್ತು ಸಹೋದರಿಯೊಂದಿಗೆ ಸವಾರಿ ಮಾಡುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಆಕೆಯ ದೇಹವನ್ನು ಸುಮಾರು ಅರ್ಧ ಕಿ.ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಬ್ರಹ್ಮಣಿಪಾಲಿ ಗ್ರಾಮದ ಬಿನಾಪಾನಿ ಪಾಂಡೆ ಎಂಬಾತ ತನ್ನ ಇಬ್ಬರು ಪುತ್ರಿಯರೊಂದಿಗೆ ಮೋಟಾರ್‌ ಸೈಕಲ್‌ನಲ್ಲಿ ಪುಯಿಂತಲಾ ಬ್ಲಾಕ್‌ ಕಡೆಗೆ ಹೋಗುತ್ತಿದ್ದಾಗ ಅತೀ ವೇಗದಲ್ಲಿ ಬಂದ ಬಸ್ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಘಟನೆಯಿಂದ ಸುಮಾರು 14 ವರ್ಷದ ಅಪ್ರಾಪ್ತ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಿನಾಪಾನಿ ಮತ್ತು ಆತನ ಹಿರಿಯ ಮಗಳಿಗೆ ಗಂಭೀರ ಗಾಯಗಳಾಗಿವೆ. ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಬಸ್ ನಿಲ್ಲಿಸದ ಚಾಲಕ, ಬಾಲಕಿಯ ಶವವನ್ನು ಎಳೆದೊಯ್ದಿದ್ದಾನೆ.

ನಂತರ ಸ್ಥಳೀಯರು ಗಾಯಾಳುಗಳನ್ನು ಬಲಂಗೀರ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಬುರ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿ, ಬಲಂಗೀರ್ ಮತ್ತು ಸೋನೆಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ತಡೆದು ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು. ಬಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಬಲಂಗೀರ್ ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ತೋಫನ್ ಬಾಗ್ ಮತ್ತು ಪುಯಿಂತಲ ತಹಶೀಲ್ದಾರ್ ರೋಹಿತ್ ಭೋಯಿ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿದರು.

ಬಸ್ ವಶಪಡಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ. ಈಗ ಸಂತ್ರಸ್ತರ ಕುಟುಂಬಸ್ಥರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com