ಬಲೋಡಾ ಬಜಾರ್ ಹಿಂಸಾಚಾರ ಪ್ರಕರಣ: ಛತ್ತೀಸ್‌ಗಢ ಕಾಂಗ್ರೆಸ್ ಶಾಸಕ ದೇವೇಂದ್ರ ಬಂಧನ

ಯಾದವ್ ಅವರನ್ನು ಬಂಧಿಸುವ ಮುನ್ನ ಭಿಲಾಯಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಪ್ರತಿಭಟನೆ ಮತ್ತು ರಾಜಕೀಯ ಹೈಡ್ರಾಮವೇ ನಡೆಯಿತು.
ದೇವೇಂದ್ರ ಯಾದವ್
ದೇವೇಂದ್ರ ಯಾದವ್
Updated on: 

ರಾಯ್‌ಪುರ: ಬಲೋಡಾ ಬಜಾರ್ ಜಿಲ್ಲೆಯಲ್ಲಿ ಜೂನ್ 10 ರಂದು ನಡೆದ ಹಿಂಸಾಚಾರ ಮತ್ತು ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್ ಅವರನ್ನು ಶನಿವಾರ ಸಂಜೆ ಭಿಲಾಯ್‌ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ.

ಯಾದವ್ ಅವರನ್ನು ಬಂಧಿಸುವ ಮುನ್ನ ಭಿಲಾಯಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಪ್ರತಿಭಟನೆ ಮತ್ತು ರಾಜಕೀಯ ಹೈಡ್ರಾಮವೇ ನಡೆಯಿತು.

ಯಾದವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) 109, 120 ಬಿ, 153 ಎ, 147, 148, 149, 186, 332, 353, 341, 427 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ್ ಅಗರವಾಲ್ ಅವರು ತಿಳಿಸಿದ್ದಾರೆ.

ದೇವೇಂದ್ರ ಯಾದವ್
ಛತ್ತೀಸ್‌ಗಢ: ತಲೆಗೆ 13 ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್ ಮಹಿಳೆ ಶರಣಾಗತಿ

ಬಂಧಿತ ಶಾಸಕರನ್ನು ರಾಯ್‌ಪುರದಿಂದ ಸುಮಾರು 70 ಕಿಮೀ ದೂರದಲ್ಲಿರುವ ಬಲೋಡಾ ಬಜಾರ್‌ನ ಸಿಜೆಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಶ್ ಖಾಖಾ ಅವರು ಶಾಸಕರನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದರೊಂದಿಗೆ ಬಲೋಡಾ ಬಜಾರ್ ಹಿಂಸಾಚಾರ ಪ್ರಕರಣ ಸಂಬಂಧ 179 ಜನರನ್ನು ಬಂಧಿಸದಂತಾಗಿದೆ. ಈ ವರ್ಷದ ಆರಂಭದಲ್ಲಿ ಬಿಲಾಸ್‌ಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎರಡು ಬಾರಿ ಕಾಂಗ್ರೆಸ್ ಶಾಸಕ ಯಾದವ್ ಅವರನ್ನು ವಿಚಾರಣೆಗಾಗಿ ಮೂರು ಬಾರಿ ಕರೆಸಲಾಗಿತ್ತು. ಆದರೆ ಹಾಜರಾಗಲು ವಿಫಲರಾಗಿದ್ದರು. ಬದಲಾಗಿ ತಮ್ಮ ನಿವಾಸಕ್ಕೆ ಆಗಮಿಸಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದರು.

ಸತ್ನಾಮಿ ಸಮುದಾಯದ(ಪರಿಶಿಷ್ಟ ಜಾತಿ) ಬೃಹತ್ ಪ್ರತಿಭಟನೆ ವೇಳೆ ಭಾರಿ ಹಿಂಸಾಚಾರ ನಡೆದಿತ್ತು. ಕಲೆಕ್ಟರೇಟ್ ಕಟ್ಟಡವನ್ನು ಧ್ವಂಸಗೊಳಿಸಿ, ನೂರಾರು ವಾಹನಗಳನ್ನು ಸುಟ್ಟುಹಾಕಲಾಗಿತ್ತು ಮತ್ತು ಸಾರ್ವಜನಿಕ ಆಸ್ತಿಗೆ ವ್ಯಾಪಕ ಹಾನಿಯನ್ನುಂಟುಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com